ಉಡುಪಿ : ಬಹುಕೋಟಿ ಉದ್ಯಮಿ ಬಿ.ಆರ್.ಶೆಟ್ಟಿ ಆಸ್ಪತ್ರೆ ಸರಕಾರದ ತೆಕ್ಕೆಗೆ !!!
ಉದ್ಯಮಿ ಬಿ ಆರ್ ಶೆಟ್ಟಿ ಅವರು ನಡೆಸುತ್ತಿದ್ದ ಖಾಸಗಿ ಸಹಭಾಗಿತ್ವದ ಉಡುಪಿಯ ಸರಕಾರಿ ಹೆರಿಗೆ ಆಸ್ಪತ್ರೆಯನ್ನು ಸರಕಾರ ತನ್ನ ವಶಕ್ಕೆ ಪಡೆದುಕೊಂಡಿದೆ. ಬಿ ಆರ್ ಶೆಟ್ಟಿ ಅವರು ಆರ್ಥಿಕ ದಿವಾಳಿಯಾದ ನಂತರ, ಆಸ್ಪತ್ರೆಯ ನಿರ್ವಹಣೆ ಅಸಾಧ್ಯವಾಗಿತ್ತು. ಹಾಗಾಗಿ ಜೂನ್ ತಿಂಗಳಿಂದ ಆಸ್ಪತ್ರೆಯ ಹೊಣೆ ಸರ್ಕಾರವೇ ನಿರ್ವಹಿಸಲಿದೆ.
ಇದರ ಮಧ್ಯದಲ್ಲಿ ಆಸ್ಪತ್ರೆ ನಿರ್ವಹಣೆ ಮಾಡುತ್ತಿದ್ದ ಬಿಆರ್ ವೆಂಚರ್ಸ್ ನವರು, ಆಸ್ಪತ್ರೆಯಲ್ಲಿರುವ ಪೀಠೋಪಕರಣಗಳನ್ನು ವಾಹನ ಮೂಲಕ ಸಾಗಾಟ ಮಾಡಲು ಪ್ರಯತ್ನಿಸಿ ಸಾರ್ವಜನಿಕರ ಕೋಪಕ್ಕೆ ತುತ್ತಾಗಿದ್ದಾರೆ. ಆಸ್ಪತ್ರೆಯ ಒಳಗಿದ್ದ ಐಶಾರಾಮಿ ಸೋಫಾ ಕುರ್ಚಿಗಳು, ಟೇಬಲ್ ಇತ್ಯಾದಿಗಳನ್ನು ಲಾರಿಯ ಮೂಲಕ ಸಾಗಾಟ ನಡೆಸಲು ಮುಂದಾಗಿದ್ದು, ಆರೋಗ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಈ ಸಾಗಾಟ ನಿಲ್ಲಿಸಿದ್ದಾರೆ. ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್ ಆಸ್ಪತ್ರೆಗೆ ಭೇಟಿ ಕೊಟ್ಟು ಅಲ್ಲಿಂದ ಯಾವುದೇ ವಸ್ತುಗಳನ್ನು ಕೊಂಡೊಯ್ಯದಂತೆ ತಾಕೀತು ಮಾಡಿದರು.
ಇನ್ನು ಮುಂದೆ ಆಸ್ಪತ್ರೆಯನ್ನು ಸರಕಾರ ನಿರ್ವಹಿಸಲಿದೆ, ಹಾಗಾಗಿ ಆಸ್ಪತ್ರೆಯಲ್ಲಿರುವ ಸ್ವತ್ತುಗಳ ಜವಾಬ್ದಾರಿ ಸರಕಾರದ್ದು. ಆರೋಗ್ಯ ಇಲಾಖೆಗೆ ಪತ್ರ ಬರೆದು ಬೇಡಿಕೆ ಸಲ್ಲಿಸಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ನಾಯಕ್ ತಿಳಿಸಿದರು.
ವ್ಯವಹಾರದಲ್ಲಿ ನಷ್ಟ ಅನುಭವಿಸಿದ ನಂತರ ಬಿಆರ್ ಶೆಟ್ಟರು ಆಸ್ಪತ್ರೆಯನ್ನು ಸರಕಾರಕ್ಕೆ ಹಿಂದಿರುಗಿಸಿದ್ದಾರೆ. ಈ ಬಗ್ಗೆ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಕೂಡ ಹೊರಡಿಸಿದೆ. ಸದ್ಯ ಈ ಖಾಸಗಿ ಆಸ್ಪತ್ರೆಯನ್ನು ಸರ್ಕಾರ ನಿರ್ವಹಿಸಲು ಮುಂದಾಗಿದೆ. ಈ ಸಂಬಂಧ ಏಳು ಕೋಟಿ ರೂಪಾಯಿ ಬಿಡುಗಡೆಯಾಗುವುದು ಬಾಕಿ ಇದೆ. ಈವರೆಗೆ ಸಂಪೂರ್ಣ ಖಾಸಗಿಯವರೇ ಆಸ್ಪತ್ರೆಯನ್ನು ನಿಭಾಯಿಸುತ್ತಿದ್ದರು. ಇನ್ನು ಮುಂದೆ ಸರಕಾರ ಸಿಬ್ಬಂದಿಗಳನ್ನು ನೇಮಕ ಮಾಡಿ ಹೆರಿಗೆ ಆಸ್ಪತ್ರೆಯ ನಿರ್ವಹಣೆ ಮಾಡಬೇಕಾಗಿದೆ.
ಸದ್ಯ ಆಸ್ಪತ್ರೆಯಲ್ಲಿ ಇನ್ನೂರಕ್ಕೂ ಅಧಿಕ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಖಾಸಗಿಯವರು ನೇಮಕ ಮಾಡಿಕೊಂಡ ಸಿಬ್ಬಂದಿಗಳಿಗೆ ಭವಿಷ್ಯದಲ್ಲಿ ಉದ್ಯೋಗ ಭದ್ರತೆ ಇಲ್ಲ. ಬಹುತೇಕ ಸಿಬ್ಬಂದಿಗಳನ್ನು ಕೈಬಿಡುವುದಾಗಿ ಸರಕಾರ ನೋಟೀಸು ನೀಡಿದೆ. ಸಿಬ್ಬಂದಿಗಳಿಗೆ ಐದು ತಿಂಗಳ ಸಂಬಳ ನೀಡುವುದು ಬಾಕಿ ಇದೆ. ಸಂಬಳ ಪಡೆಯದೇ ಉದ್ಯೋಗ ಬಿಡುವುದು ಹೇಗೆ ಎಂದು ಸಿಬ್ಬಂದಿಗಳು ಚಿಂತಿತರಾಗಿದ್ದಾರೆ. ತಾವು ಕಾರ್ಯನಿರ್ವಹಿಸುತ್ತಿರುವ ಕೊನೆಯ ದಿನ ಆಸ್ಪತ್ರೆಯ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಜೂನ್ 1ರಂದು ಉಡುಪಿ ಜಿಲ್ಲೆಯಲ್ಲಿರುವ ಮುಖ್ಯಮಂತ್ರಿಗಳ ಗಮನ ಸೆಳೆಯಲು ಆಸ್ಪತ್ರೆಯ ಸಿಬ್ಬಂದಿಗಳು ತೀರ್ಮಾನಿಸಿದ್ದಾರೆ.