ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಯದ್ವೀರ್ ಸಿಂಗ್ ಮೇಲೆ ಕಪ್ಪು ಮಸಿ ಎರಚಿ ಪ್ರತಿಭಟನೆ!!
ಬೆಂಗಳೂರು: ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಯುದ್ವೀರ್ ಸಿಂಗ್ ಮೇಲೆ ಕಪ್ಪು ಮಸಿ ಎರಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೋಮವಾರ ರಾಜ್ಯ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರೈತ ಮುಖಂಡರಾದ ರಾಕೇಶ್ ಟಿಕಾಯತ್ ಮತ್ತು ಯದ್ವೀರ್ ಸಿಂಗ್ ಮೇಲೆ ಕಪ್ಪು ಮಸಿ ಎರಚಲಾಗಿದೆ. ಕರ್ನಾಟಕದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹಣ ಕೇಳುವ ವೇಳೆ ಸಿಕ್ಕಿಬಿದ್ದಿರುವ ಪ್ರಾದೇಶಿಕ ವಾಹಿನಿಯೊಂದರ ಕುಟುಕು ಕಾರ್ಯಾಚರಣೆಯ ವೀಡಿಯೋ ಬಗ್ಗೆ ಸ್ಪಷ್ಟನೆ ನೀಡುತ್ತಿರುವಾಗ ಟಿಕಾಯತ್ ಮತ್ತು ಸಿಂಗ್ ಮುಖಕ್ಕೆ ಮಸಿ ಎರಚಲಾಗಿದೆ.
ನಾವು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಕೋಡಿಹಳ್ಳಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟಿಕಾಯತ್ ಮತ್ತು ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಯುತ್ತಿದ್ದಂತೆ ಕೆಲವರು ವಾಗ್ವಾದಕ್ಕಿಳಿದು ಮಸಿ ಎರಚಿದ್ದಾರೆ. ನಂತರ ಅಲ್ಲಿದ್ದ ಕುರ್ಚಿಗಳನ್ನು ಎಳೆದು ಬಿಸಾಡಿದ್ದಾರೆ.
ರಾಕೇಶ್ ಟಿಕಾಯತ್ ಮೇಲೆ ಕೋಡಿಹಳ್ಳಿ ಚಂದ್ರಶೇಖರ್ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಇದಕ್ಕೆ ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಸ್ಪಷ್ಟಿಕರಣ ನೀಡುತ್ತಿದ್ದ ವೇಳೆ ಮಸಿ ಬಳಿಯಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಕೇಶ್ ಟಿಕಾಯತ್, ಮಸಿ ಬಳಿದವರು ಯಾರು ಎಂಬುದು ಗೊತ್ತಿಲ್ಲ. ಆದರೆ ಈ ರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳುವುದು ಪೊಲೀಸರ ಕರ್ತವ್ಯ ಎಂದಿದ್ದಾರೆ. ಈಗಾಗಲೇ ಮಸಿ ಬಳಿದಿರುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಎರಡೂ ಬಣದ ರೈತರು ಗಾಂಧಿ ಭವನದಲ್ಲಿ ಕುರ್ಚಿ ತಗೊಂಡು ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.