ಮೂರು ವರ್ಷದಿಂದಲೂ ಟಾಯ್ಲೆಟ್ ನಲ್ಲೇ ಜೀವನ ಕಳೆಯುತ್ತಿರುವ ಅಜ್ಜಿ!

ಆಕೆ ಅನಾಥೆ. ಇದ್ದ ಮನೆಯನ್ನು ಕಳೆದುಕೊಂಡು ಮಲಗಲು ಸೂರಿಲ್ಲದೆ, ಬಿಸಿಲು, ಮಳೆ, ಚಳಿಗೆ ದೇವಸ್ಥಾನ, ಬೀದಿ ಬದಿಗಳಲ್ಲಿ ದಿನಕಳೆಯುವ ಬಡ ಜೀವ. ಹೌದು. ಈಕೆಗೆ ಈಗ ಆಸರೆಯಾಗಿರುವುದು ಶೌಚಾಲಯ ಮಾತ್ರ. ಊಟ, ಅಡುಗೆ ಎಲ್ಲಾ ಅದರಲ್ಲೇ.

ಇದು ತಿಮ್ಮಾಪುರ ಗ್ರಾಮದ ಸುಮಾರು 65 ವಯಸ್ಸಿನ ಹನುಮವ್ವ ಯಲ್ಲಪ್ಪ ಗದಗ ಎಂಬ ವೃದ್ಧೆಯ ಕಣ್ಣೀರ ಕಥೆಯಿದು. ಕಳೆದ 3 ವರ್ಷಗಳ ಹಿಂದೆಯೇ ವೃದ್ಧೆಗಿದ್ದ ಸೂರೊಂದು ಬಿದ್ದಿದ್ದು, ಇದರಿಂದ ವೃದ್ಧೆ ಬೀದಿಯಲ್ಲಿಯೇ ಆಶ್ರಯ ಪಡೆಯುತ್ತಿದ್ದಾಳೆ. ಟಾಯ್ಲೆಟ್ ನಲ್ಲಿದ್ದ ಕಮೋಡ್ ತೆಗೆದಿಟ್ಟು ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದಾಳೆ. ಅಡುಗೆಗೆ ಬೇಕಾದ ಆಹಾರ ಪದಾರ್ಥಗಳನ್ನೂ ಟಾಯ್ಲೆಟ್ ನಲ್ಲಿಟ್ಟಿದ್ದಾಳೆ. ಮನೆ ಇಲ್ಲದ ಮುದುಕಿಗೆ ಸದ್ಯ ಸ್ವಚ್ಚ ಭಾರತ ಯೋಜನೆಯಡಿ ಗ್ರಾಮ ಪಂಚಾಯತಿಯವರು ಕಟ್ಟಿಸಿಕೊಟ್ಟಿರುವ ಚಿಕ್ಕ ಟಾಯ್ಲೆಟ್ ಆಶ್ರಯ ತಾಣವಾಗಿದೆ. ಅಜ್ಜಿಯ ಈ ಕರುಣಾಜನಕ‌ ಕಥೆ ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ಆದ್ರೆ ಅಲ್ಲಿದ್ದ ಅಧಿಕಾರಿಗಳಿಗೆ ಮಾತ್ರ ಇದು ಕಾಣದೇ ಹೋಗಿದೆ.

ವೃದ್ಧೆ ಹನಮವ್ವನಿಗೆ ಮೂವರು ಹೆಣ್ಮಕ್ಕಳು ಇದ್ದು, ತನ್ನ ಮೂರು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದಾಳೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬಂತೆ ಅಜ್ಜಿಯ ಕಷ್ಟಕ್ಕೆ ಯಾರು ಮುಂದೆ ಬರುತ್ತಿಲ್ಲ. ಅಲ್ಲದೆ, ಹನಮವ್ವ ತನ್ನ ಪತಿಯನ್ನು ಮೂವತ್ತು ವರ್ಷದ ಹಿಂದೆಯೇ ಕಳೆದುಕೊಂಡಿದ್ದಾರೆ. ಆದರೂ ಎದೆಗುಂದದ ಹನುಮಮ್ಮ ತಾನೊಬ್ಬಳೇ ಹೆಣ್ಮುಕ್ಕಳ ಮದುವೆ ಮಾಡಿ ತೋರಿಸಿದ ಗಟ್ಟಿಗಿತ್ತಿ. ಆದ್ರೆ, ಸದ್ಯದ ಕಷ್ಟವನ್ನು ಎದುರಿಸಲು ಆಕೆ ಒಬ್ಬಂಟಿಯಾಗಿದ್ದಾಳೆ.

ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಒದಗಿಸಬೇಕಾದ, ಸ್ಥಳೀಯ ಜನರ ಸಮಸ್ಯೆ ಬಗೆಹರಿಸಬೇಕಾದ ಗ್ರಾಮ ಪಂಚಾಯತಿ ಅಜ್ಜಿ ಆಶ್ರಯ ಪಡೆದಿರುವ ಶೌಚಾಲಯದಿಂದ ಸ್ವಲ್ಪವೇ ದೂರದಲ್ಲಿಯೇ ಇದೆ. ಆದರೆ, ಅಜ್ಜಿಯ ಕಷ್ಟಕ್ಕಾಗಬೇಕಿರುವ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಕಿವಿಯೂ ಕೇಳ್ತಿಲ್ಲ. ಕಣ್ಣು ಕಾಣಿಸ್ತಿಲ್ಲ.

‘ಪಾಲಿಗೆ ಬಂದಿದ್ದು ಪಂಚಾಮೃತ ಅಂತಾ ಜೀವನ್ದಾಗ ಬಂದಿದ್ದನ್ನು ಅನುಭವಿಸ್ತಿದ್ದೇ‌ನೆ. ಕಷ್ಟ ಇದೆ ಅಂತಾ ಸಾಯೋಕೆ ವರಸಿಗೊಳ್ಳೋಕೆ ಇರುವೆಯಲ್ಲ, ತಗಣಿಯಲ್ಲ. ಸರ್ಕಾರದಿಂದ ತಿಂಗ್ಳಾ ಬರುವ 800 ರೂ. ರೊಕ್ಕದಾಗ ಜೀವನ ನಡೆಸ್ತಿದ್ದೀನಿ. ಇದ್ರೆ ತಿಂತೀನಿ, ಇರದಿದ್ದರೆ ಉಪವಾಸ ಮಲಗ್ತೀನಿ. ಗಂಡು ಮಕ್ಳು ಇದ್ದಿದ್ರೆ ನಾನು ಚಂದಾಗಿರ್ತಿದ್ದೆ. ನನಗೆ ಇಂತಹ ದುಸ್ಥಿತಿ ಬರ್ತಿರಲಿಲ್ಲ. ಮಂದಿಗೆ ಹೊರೆಯಾಗಬಾರದು ಅಂತಾ ಇಲ್ಲೇ ಇರುವ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಮಲ್ಕೊಳ್ತೀನಿ. ಮನೆ ಬಿದ್ದು ಮೂರು ವರ್ಷಕ್ಕೂ ಹೆಚ್ಚಾಗಿದೆ. ಮನೆ ಬಿದ್ದಿದ್ದಕ್ಕೂ ಪಂಚಾಯತಿಯವ್ರು ಪರಿಹಾರ ಕೊಟ್ಟಿಲ್ಲ. ಇಷ್ಟೊರ್ಷ ಆದ್ರೂ ಮನೆ ಹಾಕಿಲ್ಲ. ಬಿಸಲಾಗ, ಮಳ್ಯಾಗ, ಚಳ್ಯಾಗ ಕುಂದ್ರಾಕ ನೆರಳು ಮಾಡಿಕೊಡ್ರಿ ಅಂತಾ ಕೇಳಿದ್ರು ಯಾರು ದರ್ಕಾರ ಮಾಡುವಲ್ರು’ ಎಂದು ವೃದ್ಧೆ ತನ್ನೊಡಲೊಳಗಿನ ನೋವು ತೆರೆದಿಟ್ಟಿದ್ದಾಳೆ.

ಮನೆ ಹಾಕಿಸಿ ಕೊಡಾಕ ಬ್ಯಾಂಕ್ ಪಾಸ್ ಬುಕ್, ಓಟರ್ ಕಾರ್ಡ್, ರೇಷನ್ ಕಾರ್ಡ್, ಆಧಾರ್‌ ಕಾರ್ಡ್ ಬೇಕಂದ್ರು. ಅದೆಲ್ಲವನ್ನೂ ಮಾಡ್ಸೀನ್ರಿ. ನಮ್ಮೂರಾಗಿನ ಮೇಂಬರ್ ಗೂ ಇವನ್ನೆಲ್ಲಾ ಕೊಟ್ಟೀನ್ರಿ. ಲಗೂನ ಒಂದು‌ ಮನೆ ಹಾಕಿಸಿ‌ ಪುಣ್ಯ ಕಟ್ಕೊಳ್ರಿ ಅಂತಾ ಹೇಳಿದ್ರು, ಯಾರು ತಲೆಕೆಡಸಿಕೊಳ್ತಿಲ್ರಿ. ಏನ್ ಮಾಡೋದ್ರಿ ಶಿವ ಅಂತಾ ಜೀವನ ಸಾಗಿಸ್ತಿದ್ದೀನಿ ಅಂತಾರೆ ಈ ಅಜ್ಜಿ. ಈಕೆಯ ಈ ಕಣ್ಣೀರ ಕಥೆ ಅಧಿಕಾರಿಗಳಿಗೆ ಮನಮುಟ್ಟುವಂತೆ ಆಗಲಿ ಎಂಬುದೇ ಆಶಯ…

Leave A Reply

Your email address will not be published.