ಕಾಲೇಜ್ ಕ್ಯಾಂಪಸ್ ನಲ್ಲಿ ಶಿಕ್ಷಕನಿಂದ ನಮಾಜ್ !!- ವೀಡಿಯೋ ವೈರಲ್
ಕಾಲೇಜು ಕ್ಯಾಂಪಸ್‍ನಲ್ಲಿ ಶಿಕ್ಷಕರೊಬ್ಬರು ನಮಾಜ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಯುವ ಬಿಜೆಪಿ ಮುಖಂಡರು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಅಲಿಗಢದ ಶ್ರೀವರ್ಷಿಣಿ ಕಾಲೇಜಿನಲ್ಲಿ ಶಿಕ್ಷಕರೊಬ್ಬರು ನಮಾಜ್ ಮಾಡುತ್ತಿರುವ ವೀಡಿಯೋ ಎಲ್ಲಕಡೆ ಹರಿದಾಡುತ್ತಿದೆ. ವೀಡಿಯೋ ನೋಡಿದ ಬಿಜೆಪಿ ಯುವ ಮೋರ್ಚಾ ಮುಖಂಡರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಮೋರ್ಚಾದ ಮಹಾನಗರ ಘಟಕದ ಉಪಾಧ್ಯಕ್ಷರ ನೇತೃತ್ವದಲ್ಲಿ ಅಲಿಗಢದ ಶ್ರೀವರ್ಷಿಣಿ ಕಾಲೇಜಿಗೆ ಆಗಮಿಸಿ, ಈ ಕುರಿತು ವಿಚಾರಣೆ ನಡೆಸಿದ್ದಾರೆ. ಅದಕ್ಕೆ ಕಾಲೇಜು ಪ್ರಾಂಶುಪಾಲರು, ಸಮಿತಿ ರಚಿಸಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಬಿಜೆಪಿ ಮುಖಂಡರು, ಇದು ನಮಾಜ್ ಮಾಡಲು ಧಾರ್ಮಿಕ ಸ್ಥಳವಲ್ಲ. ಪ್ರಾಧ್ಯಾಪಕರು ಮಕ್ಕಳಿಗೆ ತರಗತಿ ಮಾಡುವುದನ್ನು ಬಿಟ್ಟು, ಶಿಕ್ಷಣ ಸಂಸ್ಥೆಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಹೇಗೆ? ಹಿಂದೂಗಳು, ಮುಸ್ಲಿಮರು, ಸಿಖ್ಖರು ಸೇರಿದಂತೆ ಎಲ್ಲ ಧರ್ಮೀಯರು ಶಿಕ್ಷಣ ಸಂಸ್ಥೆಗಳಿಗೆ ಬರುವುದರಿಂದ ಅವರನ್ನೂ ಸಮಾನವಾಗಿ ಪರಿಗಣಿಸಬೇಕು. ಅದಕ್ಕೆ ನಮಾಜ್ ಮಾಡಿದ ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸದರು.
ಪರಿಸ್ಥಿತಿಯ ಬಗ್ಗೆ ವಿವರಿಸಿದ ಕಾಲೇಜಿನ ಪ್ರಾಂಶುಪಾಲರು, ಈ ವಿಷಯಕ್ಕೆ ಸಂಬಂಧಿಸಿದಂತೆ, ಈ ಆರೋಪದ ಬಗ್ಗೆ ತಿಳಿಯಲು ಸಮಿತಿಯನ್ನು ರಚಿಸಿ ಅದರ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು. ಮುಂದೆ ಇಂತಹ ಧಾರ್ಮಿಕ ವಿವಾದ ಸೃಷ್ಟಿಯಾಗುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡುತ್ತೇನೆ ಎಂದರು.