ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮಹಿಳೆಯರು ದುಡಿಯುವಂತಿಲ್ಲ !! | ಸರ್ಕಾರದಿಂದ ಖಡಕ್ ಆದೇಶ
ಮಹಿಳೆಯರಿಗೆ ಒಂದಿಲ್ಲೊಂದು ರೀತಿಯಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿರುವ ಸಿಎಂ ಯೋಗಿ ಆದಿತ್ಯನಾಥ್ ಇದೀಗ ಮಹತ್ವದ ಆದೇಶವನ್ನು ಪ್ರಕಟಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಮಹಿಳಾ ಉದ್ಯೋಗಿಗಳ ಲಿಖಿತ ಒಪ್ಪಿಗೆ ಇಲ್ಲದೇ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ದುಡಿಸುವಂತಿಲ್ಲ ಎಂದು ಯೋಗಿ ಸರ್ಕಾರ ಆದೇಶ ಪ್ರಕಟಿಸಿದೆ.
ಮಹಿಳಾ ಉದ್ಯೋಗಿಗಳು ರಾತ್ರಿ ಕೆಲಸ ಮಾಡುತ್ತಿದ್ದರೆ ಅವರಿಗೆ ಉಚಿತ ಸಾರಿಗೆ, ಆಹಾರವನ್ನು ಕಂಪನಿ ಕಡ್ಡಾಯವಾಗಿ ನೀಡಬೇಕೆಂದು ಸರ್ಕಾರ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ಒಂದು ವೇಳೆ ಈ ಆದೇಶವನ್ನು ಪಾಲನೆ ಮಾಡದೇ ಇದ್ದರೆ ಕಾರ್ಮಿಕ ಕಾನೂನು ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.
ಯೋಗಿ ಆದಿತ್ಯನಾಥ್ ಸರ್ಕಾರ ಈ ಹಿಂದೆ ಮಹಿಳಾ ಸಬಲೀಕರಣ ಯೋಜನೆಗೆ 75.50 ಕೋಟಿ ರೂ. ಪ್ರಸ್ತಾಪಿಸಿತ್ತು. ಜಿಲ್ಲಾ ಮಟ್ಟದಲ್ಲಿ ಮಹಿಳೆಯರಿಗಾಗಿ ಸೈಬರ್ ಸಪೋರ್ಟ್ ಡೆಸ್ಕ್‌ಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ.
ಸುತ್ತೋಲೆಯಲ್ಲೇನಿದೆ?
ರಾತ್ರಿ ಕರ್ತವ್ಯದ ಸಮಯದಲ್ಲಿ ಮಹಿಳೆಯರಿಗೆ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕಂಪನಿ ಅಥವಾ ಸಂಸ್ಥೆ ಮಹಿಳಾ ದೌರ್ಜನ್ಯವನ್ನು ತಡೆಗಟ್ಟಲು ಸಮಿತಿಯನ್ನು ರಚಿಸಬೇಕು. ಕಂಪನಿಗಳಲ್ಲಿ ಮಹಿಳೆಯರಿಗೆ ಸ್ನಾನಗೃಹ ಮತ್ತು ಬಟ್ಟೆಯನ್ನು ಬದಲಾಯಿಸುವ ಕೊಠಡಿ ಇರತಕ್ಕದ್ದು. ಕಚೇರಿಗಳಲ್ಲಿ ಕನಿಷ್ಟ 4 ಮಹಿಳಾ ಸಿಬ್ಬಂದಿ ಇದ್ದಲ್ಲಿ ಮಾತ್ರ ಕೆಲಸ ಮಾಡಬಹುದು.