ಸದೃಡವಾದ ಮಣ್ಣಿಂದ ಒಳ್ಳೆಯ ಬೆಳೆ ಸಾಧ್ಯ- ಬದರಿಪ್ರಸಾದ್.ಪಿ.ಆರ್
ವಿಜಯನಗರ ಹೊಸಪೇಟೆ : ಬೆಳೆಗೆ ಮಣ್ಣೆ ಮೂಲಾಧಾರ, ಸದೃಡವಾದ ಮಣ್ಣಿಂದ ಒಳ್ಳೆಯ ಬೆಳೆ ಸಾಧ್ಯ ಎಂದು ಕೃಷಿ ವಿಜ್ಞಾನಿ ಬದರಿಪ್ರಸಾದ್.ಪಿ.ಆರ್ ಅಭಿಪ್ರಾಯಪಟ್ಟರು. ಅವರು ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಆನ್ಲೈನ್ ನಲ್ಲಿ ನಡೆದ ಯುವ ವಿಕಾಸ ಕಾರ್ಯಕ್ರಮದ ಭಾಗವಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿ ಕೀಟಗಳ ಪಾತ್ರ ವಿಷಯದ ಕುರಿತು ಉಪನ್ಯಾಸ ನೀಡಿದರು. ಮನುಷ್ಯ ಸತ್ತರೆ ಮಣ್ಣಿಗೆ ಅದೇ ಮಣ್ಣು ಸತ್ತರೆ ಎಲ್ಲಿಗೆ ಎನ್ನುವ ಮಾರ್ಮಿಕವಾದ ಪ್ರಶ್ನೆಯನ್ನು ವ್ಯಕ್ತಪಡಿಸಿದರು. ಪರಾಗಸ್ಪರ್ಶ ಪ್ರಕ್ರಿಯೆಯಲ್ಲಿ ಕೀಟಗಳ ಪಾತ್ರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಲಂಕಾರಿಕ ಆಭರಣಗಳಾಗಿ ಕೀಟಗಳನ್ನು ಪುರಾತನಕಾಲದಿಂದಲೂ ಬಳಸುತ್ತ ಬಂದಿದ್ದೇವೆ ಎಂದರು.
ವಿಕಾಸ ಯುವಕ ಮಂಡಲದ ಸದಸ್ಯರಾದ ಗೋವಿಂದ ಕುಲಕರ್ಣಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಣ್ಣಿನ ಫಲವತ್ತತೆಯ ಕೊರತೆಯ ಕಾರಣದಿಂದಾಗಿ ಆರೋಗ್ಯವಂತ ಸಮಾಜ ನಿರ್ಮೂಲನೆಯಾಗುತ್ತಿದೆ ಎಂದರು. ಬ್ಯಾಂಕಿನ ಅಧಿಕಾರಿಯಾದ ಶರಬಣ್ಣ ಜವಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಾರ್ವಜನಿಕರು ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಂಡು ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಬ್ಯಾಂಕಿನ ಅಧ್ಯಕ್ಷರಾದ ವಿಶ್ವನಾಥ ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಸಿಂಧನೂರು ಶಾಖೆಯ ಉಸ್ತುವಾರಿಯಲ್ಲಿ ಬ್ಯಾಂಕಿನ ಅಧಿಕಾರಿಗಳಾದ ಶಿವಕುಮಾರ, ನಾಗರಾಜ್ ಕಲ್ಮಠ ಹಾಗೂ ಪ್ರಮೀಳಾ ನಿರ್ವಹಿಸಿದರು.