SSLC ಉತ್ತರ ಪತ್ರಿಕೆಯ ಸ್ಕ್ಯಾನ್ ಹಾಗೂ ಮರು ಮೌಲ್ಯಮಾಪನಕ್ಕೆ ವೆಬ್ಸೈಟ್ ಓಪನ್ | ಲೋಪದೋಷ ಸರಪಡಿಸಿದ ಪರೀಕ್ಷಾ ಮಂಡಳಿ
SSLC ಪರೀಕ್ಷೆಯ ಫಲಿತಾಂಶವನ್ನು ಮೇ 19 ರಂದು ಪ್ರಕಟಿಸಲಾಗಿತ್ತು. ಈ ಬಾರಿ ಉತ್ತಮ ಫಲಿತಾಂಶ ಬಂದಿದ್ದು, ಶೇಕಡ 85.63 ರಷ್ಟು ಫಲಿತಾಂಶ ಬಂದಿದೆ. ಇದು ಕಳೆದ ಹತ್ತು ವರ್ಷಗಳಲ್ಲಿ ದಾಖಲೆಯ ಫಲಿತಾಂಶವಾಗಿದೆ. ಆದರೆ ಫಲಿತಾಂಶ ಬಂದರೂ ಕೆಲವು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಹೌದು ಫಲಿತಾಂಶ ಬಂದಿದೆ ನಿಜ, ಆದರೆ ನಮಗೆ ಇನ್ನೂ ಹೆಚ್ಚಿನ ಅಂಕಗಳು ಬರಬೇಕಿತ್ತು ಎನ್ನುವವರ ಸಂಖ್ಯೆಯೂ ಹೆಚ್ಚಾಗಿದೆ. ಈಗ ಆ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಸ್ಕ್ಯಾನ್ ಪಡೆಯಲು ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಕೆಲವೊಂದು ಲೋಪದೋಷದಿಂದಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ಸೈಟ್ ಮೂಲಕ ಸ್ಕ್ಯಾನ್ ಪ್ರತಿ ಪಡೆಯಲಾಗದೆ ಹಾಗೂ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲೂ ಆಗದೆ ಎರಡು ದಿನ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಮೇ 20 ರಿಂದ ಮೇ 30ರವರೆಗೆ ಉತ್ತರ ಪತ್ರಿಕೆಯ ಮರುಮೌಲ್ಯಮಾಪನದ ಸ್ಕ್ಯಾನ್ ಪ್ರತಿ ಪಡೆಯಲು ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಮೇ 24 ರಿಂದ ಜೂನ್ 6ರ ವರೆಗೆ ಮಾರ್ಕ್ಸ್ಗಳ ಮರು ಎಣಿಕೆಗೆ ಮತ್ತು ಉತ್ತರ ಪತ್ರಿಕೆಯ ಮರುಮೌಲ್ಯಮಾಪನಕ್ಕೆ ಅವಕಾಶ ನೀಡಿತ್ತು.
ಆದರೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ವೆಬ್ಸೈಟ್ನಲ್ಲಿ ಲಿಂಕ್ ಇರದ ಕಾರಣ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಈ ಸಮಸ್ಯೆಯೂ ನಿನ್ನೆಯೂ ಕೂಡಾ ಮುಂದುವರೆದಿದ್ದು, ಹಲವಾರು ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ಆದರೆ ಈಗ ಈ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಮಂಡಳಿಯ ವೆಬ್ಸೈಟ್ನಲ್ಲಿ ಸ್ಕ್ಯಾನ್ ಪ್ರತಿ ಹಾಗೂ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.