ಮೇ.29 ರಂದು ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ
-ಡಾ.ಬಿ.ಗೋಪಾಲಕೃಷ್ಣ
ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ರೋಟರಿ ಪರಿವಾರದ ಸಹಯೋಗದೊಂದಿಗೆ ಮೇ.29 ರವಿವಾರದಂದು ಹಳೆಬಸ್ ನಿಲ್ದಾಣ ಹತ್ತಿರದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಹೆರಿಗೆ ಆಸ್ಪತ್ರೆಯಲ್ಲಿ ತಜ್ಞವೈದ್ಯರಿಂದ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಬಿ. ಹೇಳಿದರು.
ಪಾಲಿಕೆಯ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ವಿವಿಧ ತಜ್ಞವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಲಿದೆ. ಹಿಮೋಗ್ಲೋಬಿನ್, ರಕ್ತದ ಗುಂಪು, ಸಕ್ಕರೆ ಪ್ರಮಾಣ, ಥೈರಾಯ್ಡ್ ಪರೀಕ್ಷೆ, ಹೆಚ್‍ಬಿಎ1ಸಿ (ಸಕ್ಕರೆ ಕಾಯಿಲೆ ಪರೀಕ್ಷೆ), ಅಲ್ಟ್ರಾಸೋನೋಗ್ರಫಿ, ಇಸಿಜಿ ಹೃದಯದ ಪರೀಕ್ಷೆ, ಎಲುಬು ಸಾಂದ್ರತೆ, ಸ್ತ್ರೀಯರಲ್ಲಿ ಬರುವ ಕ್ಯಾನ್ಸರ್ ಕಾಯಿಲೆಯ ಪರೀಕ್ಷೆ ಪತ್ತಗೆ ಪ್ಯಾಪ್ ಸ್ಮಿಯರ್ ಪರೀಕ್ಷೆ ಮಾಡಲಾಗುವುದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಪ್ರಸೂತಿ ಹಾಗೂ ಸ್ತ್ರೀರೋಗ, ಚಿಕ್ಕ ಮಕ್ಕಳ, ಡಯಾಬಿಟಿಸ್ ಮತ್ತು ಹೃದಯರೋಗ, ಎಲುಬು ಮತ್ತು ಕೀಲು, ಶಸ್ತ್ರಚಿಕಿತ್ಸಾ ಹಾಗೂ ನೇತ್ರ ಚಿಕಿತ್ಸಾ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಿ ಸೇವೆ ನೀಡುವರು. ರವಿವಾರ ಬೆಳಿಗ್ಗೆ 10 ಗಂಟೆಯಿಂದ ಶಿಬಿರ ಪ್ರಾರಂಭವಾಗಲಿದೆ. ಮಧ್ಯಾಹ್ನ 2 ಗಂಟೆಯವರೆಗೆ ಸಮಯ ನಿಗದಿಗೊಳಿಸಲಾಗಿದೆ ಜನರ ಪ್ರತಿಕ್ರಿಯೆ ಆಧರಿಸಿ ಸಮಯ ವಿಸ್ತರಿಸಲಾಗುವುದು ಎಂದರು.
ರೋಟರಿ ಪರಿವಾರದ ಡಾ.ಸತೀಶ ಇರಕಲ್ ಮಾತನಾಡಿ, ವಿವಿಧ ರೋಟರಿ ಕ್ಲಬ್‍ಗಳ ಘಟಕಗಳಲ್ಲಿ ಸಾಕಷ್ಟು ವೈದ್ಯರಿದ್ದಾರೆ. ಇವರೆಲ್ಲರೂ ಸೇವಾಮನೋಭಾವ ಹೊಂದಿದ್ದಾರೆ. ಎಲ್ಲ ವೈದ್ಯರನ್ನು ರೋಟರಿ ಪರಿವಾರದಡಿ ಒಗ್ಗೂಡಿಸಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.
ರೋಟರಿ ಪರಿವಾರದ ಅಧ್ಯಕ್ಷ ವಿಜಯಕುಮಾರ ಕಟ್ಟಿಮನಿ, ಮಹಾನಗರ ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ದಂಡಪ್ಪನವರ, ಹೆರಿಗೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶೋಭಾ ಮೂಲಿಮನಿ ಮತ್ತಿತರರು ಇದ್ದರು.