ಜಿಲ್ಲಾಧಿಕಾರಿಗಳ ಆದೇಶವನ್ನೂ ಪಾಲಿಸದ ಅಧಿಕಾರಿಗಳು!

ಕೊಟ್ಟೂರು:ತಾಲ್ಲೂಕು ಹ್ಯಾಳ್ಯಾ ಗ್ರಾಮ ಪಂಚಾಯಿತಿಯ ಕಡತಗಳು ೩ ವರ್ಷದಿಂದ ಕಾಣೆಯಾಗಿವೆ ಆಗ ಪಿ.ಡಿ.ಓ. ಆಗಿದ್ದ ಪುಷ್ಪಲತಾ ಅವರು ತಮ್ಮ ಸೇವಾವಧಿಯಲ್ಲಿ ನಾಪತ್ತೆಯಾದ ಕಡತಗಳು, ದಾಖಲೆಗಳನ್ನು ಹುಡುಕಲು ಇನ್ನೂ ಸಾಧ್ಯವಾಗಿಲ್ಲ. ಕಾಣೆಯಾದ ಕಡತಗಳ ಪರಿಣಾಮವಾಗಿ ಇದುವರೆಗೂ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕುಂಠಿತವಾಗಿದೆ ಎಂದು ಸದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರು, ಸಾಮಾಜಿಕ ಕಾರ್ಯಕರ್ತರು ದೂರಿದ್ದರು.

 

ಕಡತ ನಾಪತ್ತೆಯಾದ ಬಗ್ಗೆ ತನಿಖಾಧಿಕಾರಿಗಳು ಬಂದ ಸಂದರ್ಭದಲ್ಲಿ ತನಿಖೆ ನಡೆದಿರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆದರೆ ತನಿಖೆಯ ಮಾಹಿತಿ ಮಾತ್ರ ಇದುವರೆಗೂ ಯಾರ ಕೈಗೂ ಸಿಗದೇ ಇರುವುದು ನಿಗೂಢವಾಗಿದೆ.ಈ ಕುರಿತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಲವಾರು ಬಾರಿ ತನಿಖೆ ನಡೆಸಿದರೂ ಇದುವರೆಗೂ ಪತ್ತೆಯಾಗದೇ ಇರುವುದು ಅಚ್ಚರಿ ಮೂಡಿಸಿದೆ.

ಈ ದಾಖಲೆಗಳಲ್ಲಿ ಪಂಚಾಯಿತಿಯ ಸಮಸ್ತ ವರದಿ ಇದ್ದು, ಇದರಲ್ಲಿ ಲಕ್ಷಾಂತರ ರೂ.ಗಳ ಅವ್ಯವಹಾರವಾಗಿದೆ ಎಂಬ ಮಾಹಿತಿ ಇದ್ದು, ಈ ದಾಖಲೆಗಳು ದೊರೆತರೆ ಮಾತ್ರ ದೊಡ್ಡ ಮೊತ್ತದ ಹಗರಗಣಗಳು ಬಯಲಿಗೆ ಬರುತ್ತವೆ ಎಂದು ಈ ಹಿಂದೆ ದಿನಾಂಕ ೧೯-೦೩-೨೦೨೨ ರಂದು ಕೊಟ್ಟೂರು ತಾಲೂಕಿನ ಅಲಬೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ವೇದಿಕೆಯ ವಿಜಯನಗರ ಜಿಲ್ಲೆಯ ಉಪಾಧ್ಯಕ್ಷರಾದ ಕೆ.ಕೊಟ್ರೇಶ್ ಅವರು ಸೂಕ್ತ ತನಿಖೆ ನಡೆಸುವಂತೆ ಹಾಗೂ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಕೋರಲಾಗಿತ್ತು.

ಆ ಸಂದರ್ಭದಲ್ಲಿ ಮನವಿಯನ್ನು ಜಿಲ್ಲಾಧಿಕಾರಿಗಳು ಪುರಸ್ಕರಿಸಿ ಜಿಲ್ಲಾ ಪಂಚಾಯಿತಿ ಸಿ.ಇ.ಒ. ಅವರಿಗೆ ಒಂದು ತಿಂಗಳ ಒಳಗಡೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು. ಆದರೆ ಇಲ್ಲಿಯವರೆಗೂ ಈ ಆದೇಶವನ್ನು ಪರಿಗಣಿಸದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆಗಿನ ಪಿ.ಡಿ.ಓ. ಆಗಿದ್ದ ಪುಷ್ಪಲತಾ ಅವರು ರಾಜಕೀಯ ಪ್ರಭಾವ ಬಳಸಿ ತನಿಖೆಯನ್ನು ನಡೆಸದಂತೆ ಪ್ರಭಾವ ಬೀರುತ್ತಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಕೋಟ್ ೧ : ಹ್ಯಾಳ್ಯಾ ಗ್ರಾಮ ಪಂಚಾಯಿತಿಯಲ್ಲಿ ಕಾಣೆಯಾಗಿರುವ ಕಡತಗಳ ತನಿಖೆಗೆ ಜಿಲ್ಲಾಧಿಕಾರಿಗಳು ಆದೇಶಿಸಿರುವ ಪ್ರತಿಗೆ ಅನುಗುಣವಾಗಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲಾಗುವುದು.
ಬೆಣ್ಣಿ ವಿಜಯಕುಮಾರ್,
ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ.ಕೊಟ್ಟೂರು

Leave A Reply

Your email address will not be published.