ಒಂದೇ ಮನೆಯ 14 ಮಂದಿಯ ಜೀವ ಉಳಿಸಿದ ಪವರ್ ಕಟ್ !!
ರಾತ್ರೋರಾತ್ರಿ ಈ ಗ್ರಾಮದಲ್ಲಿ ಗುಂಡಿನ ಮಳೆಗೆರೆಯಲಾಗಿದೆ. ಹಾವೇರಿಯ ಶಿಗ್ಗಾಂವಿಯ ಶೂಟೌಟ್ ಪ್ರಕರಣ ಮಾಸುವ ಮುನ್ನವೇ ಅದೇ ತಾಲೂಕಿನ ಹುಲಗೂರು ಗ್ರಾಮದಲ್ಲಿ ಮಹಿಳೆಯ ಮೇಲೆ ಫೈರಿಂಗ್ ನಡೆದಿದೆ.
ಗ್ರಾಮದ ಮಹಿಳೆ ಸಲ್ಮಾ ಮನೆಯ ಕಟ್ಟೆ ಮೇಲೆ ಕುಳಿತಿದ್ದ ವೇಳೆ ಬೈಕ್ ಮೇಲೆ ಬಂದಿದ್ದ ಮುಸುಕುಧಾರಿಗಳು ಗುಂಡು ಹಾರಿಸಿದ್ದಾರೆ. ಅದೇ ವೇಳೆಯಲ್ಲಿ ಕರೆಂಟ್ ಹೋಗಿದ್ದು, ಕತ್ತಲಾಗಿದ್ದರಿಂದ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಮಹಿಳೆ ಮನೆಯೊಳಗೆ ಓಡಿ ಹೋಗಿದ್ದಾಳೆ. ಇದರಿಂದಾಗಿ ಮನೆಯ ಗೋಡೆಗೆ ಗುಂಡು ತಾಗಿದೆ. ಒಂದು ರೀತಿಯಲ್ಲಿ ಆ ಪವರ್ ಕಟ್ 14 ಮಂದಿಯ ಜೀವ ಉಳಿಸಿದೆ ಎಂದರೆ ತಪ್ಪಾಗಲಾರದು.
ಈ ಪವರ್ ಕಟ್ ನಿಂದ ಗುಂಡಿನ ದಾಳಿಯಲ್ಲಿ ಮಹಿಳೆ ಹಾಗೂ ಮಹಿಳೆಯ ಮನೆಯವರು 14 ಜನರು ಪಾರಾಗಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಬೆಚ್ಚಿಬಿದ್ದ ಅಲ್ಲಿನ ಜನರು ಸಲ್ಮಾಳ ಮನೆ ಬಳಿ ಜಮಾಯಿಸಿದ್ದಾರೆ. ಅಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸಲ್ಮಾಳಿಗೆ ಕೆಲವು ವರ್ಷಗಳ ಹಿಂದೆ ಮದುವೆ ಆಗಿ, ಮೂವರು ಮಕ್ಕಳಿದ್ದಾರೆ. ಪತಿ ಜೊತೆ ಜಗಳ ಮಾಡಿಕೊಂಡಿದ್ದರಿಂದ ಸಲ್ಮಾ ಎರಡು ವರ್ಷಗಳಿಂದ ತವರುಮನೆ ಹುಲಗೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ಆದರೆ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಮುಸುಕುಧಾರಿಗಳು ಬಂದೂಕಿನಿಂದ ಫೈರಿಂಗ್ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಸಲ್ಮಾ, ಆಕೆಯ ಮಕ್ಕಳು, ತಂದೆ ಮತ್ತು ಅಣ್ಣತಮ್ಮಂದಿರು ಸೇರಿದಂತೆ ಒಟ್ಟು ಹದಿನಾಲ್ಕು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ದುಷ್ಕರ್ಮಿಗಳು ಬಂದೂಕಿನಿಂದ ಒಂದು ಸುತ್ತು ಗುಂಡು ಹಾರಿದೆ. ವಿಷಯ ತಿಳಿಯುತ್ತಿದ್ದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಎಸ್‍ಪಿ ವಿಜಯ್‍ಕುಮಾರ್ ಸೇರಿದಂತೆ ಶಿಗ್ಗಾಂವಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.