ಡಾ. ಯಶೋವರ್ಮ ಅವರ ಪಾರ್ಥಿವ ಶರೀರದ ನಿರೀಕ್ಷೆಯಲ್ಲಿ ಬೆಳ್ತಂಗಡಿ ಜನತೆ | ಚಾರ್ಮಾಡಿ ತಲುಪಲು ಕ್ಷಣಗಣನೆ ಆರಂಭ

SDM ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳು, ದಕ್ಷ ಆಡಳಿತಗಾರ, ಆತ್ಮೀಯರಾದ ಡಾ.ಯಶೋವರ್ಮ ಅವರ ನಿಧನದ ಸುದ್ದಿ ಅತೀವ ದುಃಖವನ್ನು ತಂದಿದೆ. ಮೇ 22ರಂದು ಸಿಂಗಾಪೂರದಲ್ಲಿ ನಿಧನರಾದ ಯಶೋವರ್ಮರವರ ಪಾರ್ಥಿವ ಶರೀರದ ಕಾನೂನು ಪ್ರಕ್ರಿಯೆ ಮೇ.23 ಮಧ್ಯಾಹ್ನ ಮುಗಿದಿದ್ದು, ರಾತ್ರಿ 12 ಗಂಟೆಗೆ ಸಿಂಗಾಪುರದಿಂದ ಇಂಡಿಗೋ ವಿಮಾನದಲ್ಲಿ ಹೊರಟು ಇಂದು ಬೆಳಗ್ಗೆ 7.30 ಗಂಟೆಗೆ ಪಾರ್ಥಿವ ಶರೀರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದೆ.

ಈ ವೇಳೆ ಎಸ್ ಡಿ ಎಂ ಹಿರಿಯ ವಿದ್ಯಾರ್ಥಿಗಳು ಪಾರ್ಥಿವ ಶರೀರಕ್ಕೆ ಮಾಲಾರ್ಪಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಬೆಂಗಳೂರು ಇದರ ಪದಾಧಿಕಾರಿಗಳು, ಯಶೋವರ್ಮರ ಅಭಿಮಾನಿಗಳು ಹಾಗೂ ಕುಟುಂಬ ವರ್ಗದವರು ಭಾಗಿಯಾಗಿದ್ದರು.

ಇನ್ನು ಮೃತದೇಹ ಬೆಂಗಳೂರಿನಿಂದ ಆಂಬ್ಯುಲೆನ್ಸ್ ಮೂಲಕ ಚಾರ್ಮಾಡಿಗೆ ತಲುಪಲಿದೆ. ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಿಂದ ಉಜಿರೆ ವೃತ್ತದವರೆಗೆ ಅಲಂಕೃತ ವಾಹನದಲ್ಲಿ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಉಜಿರೆ ವೃತ್ತದಿಂದ ಎಸ್‌ಡಿಎಂ ಕಾಲೇಜಿನವರೆಗೆ ಅಭಿಮಾನಿಗಳ ಪಾದಯಾತ್ರೆಯ ಮೆರವಣಿಗೆಯಲ್ಲಿ ಕರೆತಂದು, ಕಾಲೇಜಿನಲ್ಲಿ ಮಧ್ಯಾಹ್ನ 2 ರಿಂದ 5.30ರವರೆಗೆ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಯಶೋವರ್ಮ ಅವರ ಅಂತಿಮ ದರ್ಶನ ವ್ಯವಸ್ಥೆಯ ಕುರಿತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು. ಮೃತರ ಗೌರವಾರ್ಥ ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಉಜಿರೆ ಪೇಟೆಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದಾಗಿ ವರ್ತಕ ಸಂಘದ ಅಧ್ಯಕ್ಷ ಅರವಿಂದ್ ಕಾರಂತ ತಿಳಿಸಿದ್ದಾರೆ. ಉಜಿರೆ ಪೇಟೆಯಲ್ಲಿ ಹರತಾಳ ಆಚರಿಸುವುದಾಗಿ ಉಜಿರೆ ಆಟೊ ರಿಕ್ಷಾ ಮಾಲೀಕ ಚಾಲಕ ಸಂಘ ಮತ್ತು ಗ್ಯಾರೇಜ್ ಮಾಲೀಕರ ಸಂಘವು ನಿರ್ಧರಿಸಿದೆ.

ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಬಳಿಕ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಎಲ್ಲಾ ಶಾಲಾ ಕಾಲೇಜುಗಳಿಗೆ ನಿನ್ನೆ ರಜೆ ಸಾರಲಾಗಿತ್ತು.

Leave A Reply