ಮೇ 25 ರಂದು ಭಾರತ್ ಬಂದ್!
ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟವು ಮೇ 25 ರಂದು ಭಾರತ್ ಬಂದ್‌ಗೆ ಕರೆ ನೀಡಿದೆ.
“ಒಬಿಸಿ ಆಧಾರಿತ ಜನಗಣತಿ ನಡೆಸಬೇಕೆಂದು ಹಲವಾರು ರಾಜಕೀಯ ನಾಯಕರುಗಳು, ಸಂಘಟನೆಗಳು ಒತ್ತಾಯ ಮಾಡಿದ್ದವು. ಆದರೆ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿಲ್ಲ. ಈಗಾಗಲೇ ಜನಗಣತಿಯ ಎಲ್ಲಾ ಸಿದ್ಧತೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಈಗ ಸರ್ಕಾರದ ನಡೆಯನ್ನು ವಿರೋಧ ಮಾಡಿ ಭಾರತ್ ಬಂದ್‌ಗೆ ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟವು ಕರೆ ನೀಡಿದೆ” ಎಂದು ಬಹುಜನ ಮುಕ್ತಿ ಪಕ್ಷದ ಸಹರಾನ್‌ಪುರ ಜಿಲ್ಲಾ ಅಧ್ಯಕ್ಷ ನೀರಜ್ ಧಿಮಾನ್ ಮಾಹಿತಿ ನೀಡಿದ್ದಾರೆ.
ಹಾಗೆಯೇ ಬಿಎಂಪಿ ಅಧ್ಯಕ್ಷರು ಚುನಾವಣೆಯಲ್ಲಿ ಇವಿಎಂಗಳ ಬಳಕೆ ಮತ್ತು ಖಾಸಗಿ ವಲಯಗಳಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿಗೆ ಮೀಸಲಾತಿಯನ್ನು ಜಾರಿಗೊಳಿಸದಿರುವುದನ್ನು ವಿರೋಧ ಮಾಡಲಾಗಿದೆ. ಬಹುಜನ ಮುಕ್ತಿ ಪಕ್ಷದ ಹಂಗಾಮಿ ರಾಜ್ಯಾಧ್ಯಕ್ಷ ಡಿಪಿ ಸಿಂಗ್ ಭಾರತ್ ಬಂದ್ ಅನ್ನು ಯಶಸ್ವಿಗೊಳಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಭಾರತ್ ಬಂದ್‌ಗೆ ಕರೆ ನೀಡುವ ಹಿಂದಿರುವ ಆರೋಪ, ಬೇಡಿಕೆ ಇಲ್ಲಿದೆ ನೋಡಿ :
- ಚುನಾವಣೆಯಲ್ಲಿ ಇವಿಎಂ ಹಗರಣ ಆರೋಪ
- ಕೇಂದ್ರವು ಜಾತಿ ಆಧಾರಿತ ಒಬಿಸಿ ಜನಗಣತಿ ನಡೆಸದಿರುವುದಕ್ಕೆ ವಿರೋಧ
- ಖಾಸಗಿ ವಲಯದಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿ ಮೀಸಲಾತಿಗೆ ಬೇಡಿಕೆ
- ರೈತರಿಗೆ ಎಂಎಸ್‌ಪಿ ಖಾತ್ರಿಪಡಿಸಲು ಕಾನೂನನ್ನು ಪರಿಚಯಿಸಲು ಆಗ್ರಹ
- ಎನ್‌ಆರ್‌ಸಿ/ಸಿಎಎ/ಎನ್‌ಆರ್‌ಪಿ ವಿರುದ್ಧ ಆಕ್ರೋಶ
- ಹಳೆಯ ಪಿಂಚಣಿ ಯೋಜನೆಯನ್ನು ಪುನರಾರಂಭಿಸಲು ಒತ್ತಾಯ
- ಒಡಿಶಾ ಮತ್ತು ಮಧ್ಯಪ್ರದೇಶದಲ್ಲಿ ಪಂಚಾಯತ್ ಚುನಾವಣೆಗಳಲ್ಲಿ ಒಬಿಸಿ ಮೀಸಲಾತಿಯಲ್ಲಿ ಪ್ರತ್ಯೇಕ ಮತದಾನದ ಬೇಡಿಕೆ
- ಪರಿಸರ ಸಂರಕ್ಷಣೆಯ ನೆಪದಲ್ಲಿ ಬುಡಕಟ್ಟು ಜನರನ್ನು ಸ್ಥಳಾಂತರಿಸುವುದಕ್ಕೆ ವಿರೋಧ
- ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಜನರನ್ನು ಒತ್ತಾಯಿಸುವುದರ ವಿರುದ್ಧ
- ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರ ವಿರುದ್ಧ ರಹಸ್ಯವಾಗಿ ಮಾಡಲಾದ ಕಾರ್ಮಿಕ ಕಾನೂನುಗಳ ವಿರುದ್ಧ ರಕ್ಷಣೆಗೆ ಒತ್ತಾಯ
ಇನ್ನು ಸಾಮಾಜಿಕ ಜಾಲತಾಣದಲ್ಲಿಯೂ ಭಾರತ್ ಬಂದ್ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಜನರು ಈ ಭಾರತ್ ಬಂದ್ ಪರವಾಗಿ ವಿರೋಧವಾಗಿ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ. ಈ ಭಾರತ್ ಬಂದ್ ವೇಳೆ ಹಲವಾರು ವಹಿವಾಟುಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.