ಇನ್ನು ಕರ್ನಾಟದ ಚಿರಾಪುಂಜಿ ಆಗುಂಬೆಯಲ್ಲ! ಹಾಗಾದರೆ ಇನ್ಯಾವುದು ?
ಕರ್ನಾಟಕದ ಚಿರಾಪುಂಜಿ ಎಂದೇ ಖ್ಯಾತವಾಗಿದ್ದ, ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಆ ಸ್ಥಾನವನ್ನು ಕಳೆದುಕೊಂಡಿದೆ. ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳ ಜಿಲ್ಲೆ ಎನಿಸಿಕೊಂಡಿದ್ದ ಶಿವಮೊಗ್ಗ ಸ್ಥಾನ ಈಗ ಉಡುಪಿಗೆ ದೊರಕಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ದತ್ತಾಂಶದ ಪ್ರಕಾರ 2015ರಿಂದ 2021ರ ಅವಧಿಯಲ್ಲಿ ಐದು ವರ್ಷ ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ದಾಖಲಾಗಿದೆ.
ಉಡುಪಿ ತಾಲ್ಲೂಕಿನ ಬೈರಂಪಳ್ಳಿಯಲ್ಲಿ 2016ರಲ್ಲಿ 59.16 ಸೆಂ.ಮೀ. ಮಳೆಯಾಗಿತ್ತು. ಆ ವರ್ಷ ರಾಜ್ಯದಲ್ಲೇ ದಾಖಲಾದ ಅತಿ ಹೆಚ್ಚು ಮಳೆ ಇದು. 2017ರಲ್ಲಿ ಕಾರ್ಕಳ ತಾಲ್ಲೂಕಿನ ಶಿರ್ಲಾಲುವಿನಲ್ಲಿ ಅತಿ ಹೆಚ್ಚು ಅಂದರೆ 69.39 ಸೆಂ.ಮೀ. ಮಳೆಯಾಯಿತು. 2019ರಲ್ಲಿ ಹೆಬ್ರಿಯಲ್ಲಿ 93.40 ಸೆಂ.ಮೀ.ನಷ್ಟು ಮಳೆ ಸುರಿದು, ಆ ವರ್ಷದ ಅಧಿಕ ಮಳೆಯಾದ ಸ್ಥಳ ಎಂದೆನಿಸಿಕೊಂಡಿತು. 2020ರಲ್ಲಿ ಉಡುಪಿಯ ಇನ್ನಂಜೆಯಲ್ಲಿ ಅಧಿಕ, ಅಂದರೆ 79.88 ಸೆಂ.ಮೀ. ಮಳೆ ಸುರಿಯಿತು. ಅದರ ಮರುವರ್ಷ ಕಾರ್ಕಳದ ಮುದ್ರಾಡಿಯಲ್ಲಿ 79.49 ಸೆಂ.ಮೀ ನಷ್ಟು ಅಧಿಕ ಮಳೆಯಾಗಿತ್ತು.
ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ವಿವಿಧೆಡೆ ಮಳೆಯ ಏರುಪೇರಿನ ಸಮಸ್ಯೆ ಉಲ್ಬಣಿಸಿದೆ. ಕಳೆದ ವರ್ಷ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿನ ಮಳೆ ಪ್ರಮಾಣ ಕರ್ನಾಟಕದಲ್ಲಿ ಶೇ 60ರಷ್ಟು ಕಡಿಮೆಯಾಗಿದೆ. ಮಳೇ ಸುರಿಯುವ ಹದದಲ್ಲಿ ವ್ಯಾಪಕವಾದ ಬದಲಾವಣೆ ಆಗಿರುವುದಕ್ಕೆ ಇದೇ ಉದಾಹರಣೆ ಎನ್ನುತ್ತಾರೆ ಹವಾಮಾನ ತಜ್ಞ ಹಾಗೂ ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಸದಸ್ಯ ಬಿ.ಎಂ. ಕುಮಾರಸ್ವಾಮಿ.