ಬುರ್ಖಾದ ಒಳಗೆ ಮುಖ ತೂರಿಸಿ ಆಂಕರಿಂಗ್ ಮಾಡುವಂತೆ ಬೆದರಿಕೆ !! | ಭಯದಿಂದ ಪರದೆ ಸಮೇತ ಕಾಣಿಸಿಕೊಂಡ ನಿರೂಪಕಿಯರು
ಈ ದೇಶ ಮಹಿಳೆಯರ ಸ್ವಾತಂತ್ರ್ಯವನ್ನೇ ತನ್ನ ಕೈವಶ ಮಾಡಿಕೊಂಡಿದೆ. ಪ್ರತಿನಿತ್ಯ ಮಹಿಳೆಯರು ನರಕ ಅನುಭವಿಸುತ್ತಿದ್ದಾರೆ. ಹೌದು. ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ದಿನೇ ದಿನೇ ಮಹಿಳೆಯರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಲೇ ಇದೆ. ಚಾಲನಾ ಪರವಾನಗಿ ಕಸಿದುಕೊಂಡಾಯ್ತು, ಪುರುಷರೊಂದಿಗೆ ಉದ್ಯಾನವನ, ಉಪಹಾರಗೃಹಕ್ಕೆ ಹೋಗುವುದನ್ನೂ ನಿಷೇಧಿಸಿತು. ಇದೀಗ ದೂರದರ್ಶನಗಳಲ್ಲಿ ಕೆಲಸ ಮಾಡುವ ನಿರೂಪಕಿಯರಿಗೂ ತಮ್ಮ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುವಂತೆ ಆದೇಶಿಸಿದೆ.
ಹೌದು. ದೂರದರ್ಶನ, ಸುದ್ದಿ ವಾಹಿನಿಗಳಲ್ಲಿ ಮಹಿಳಾ ನಿರೂಪಕಿಯರು ಸುದ್ದಿ ಪ್ರಸಾರ ಮಾಡುವ ಸಂದರ್ಭ ತಮ್ಮ ಮುಖವನ್ನು ಮುಚ್ಚಿಕೊಳ್ಳುವಂತೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ದೂರದರ್ಶನ ಅಧಿಕಾರಿಗಳನ್ನು ಕೇಳಿದ್ದಾರೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ತಾಲಿಬಾನ್ ಅಫ್ಘಾನಿಸ್ತಾನದ ಎಲ್ಲಾ ಮಹಿಳೆಯರೂ ಅಡಿಯಿಂದ ಮುಡಿವರೆಗೆ ತಮ್ಮ ದೇಹವನ್ನು ಮುಚ್ಚಿಕೊಳ್ಳಬೇಕಾಗಿ ಆದೇಶ ನೀಡಿತ್ತು. ಇದೀಗ ಸುದ್ದಿ ನಿರೂಪಕಿಯರಿಗೂ ಮುಖ ಮುಚ್ಚಿಕೊಳ್ಳುವಂತೆ ಹೇಳಿದ್ದು, ಇದನ್ನು ಪಾಲಿಸಲು ಗಡುವು ಕೂಡ ನೀಡಲಾಗಿದೆ. ಇವೆಲ್ಲವನ್ನೂ ಗನ್ ನ ಮೊನೆಯಲ್ಲಿ ನಿರ್ದೇಶನ ನೀಡಲಾಗುತ್ತಿದೆ.
ತಾಲಿಬಾನ್ ಮತ್ತೆ ಈ ಹಿಂದೆ ವಿಧಿಸುತ್ತಿದ್ದ ಕಠಿಣ ಕ್ರಮಗಳನ್ನು ಮುಂದುವರಿಸಲಾರಂಭಿಸಿದೆ. ತಾಲಿಬಾನ್‌ನ ಈ ಕಠಿಣ ನಿಯಮಗಳಿಂದ ಅಫ್ಘಾನಿಸ್ತಾನ ಮಾತ್ರವಲ್ಲದೇ ವಿದೇಶಗಳಲ್ಲೂ ಜನರು ಕೆಂಗಣ್ಣು ತೋರಿದ್ದಾರೆ. ಮುಖ್ಯವಾಗಿ ಮಹಿಳೆಯರ ಸ್ವತಂತ್ರ್ಯವನ್ನು ಕಿವುಚಿ ಹಾಕುತ್ತಿರುವ ತಾಲಿಬಾನ್ ಬಗ್ಗೆ ಎಲ್ಲೆಲ್ಲೂ ಟೀಕೆಗಳು ಗ್ರಾಸವಾಗುತ್ತಿವೆ.
ಆದ್ರೆ ಏನು ಮಾಡೋಣ. ಯಾರೂ ಕೂಡ ಆ ಅಮಾಯಕರ ಸಹಾಯಕ್ಕೆ ಬರುತ್ತಿಲ್ಲ. ಅಂತಾರಾಷ್ಟ್ರೀಯ ಸಮುದಾಯಗಳು ಮೌನ ವಹಿಸಿವೆ. ಭಾರತದ ಸೋ ಕಾಲ್ಡ್ ‘ಸೋಷಲಿಸ್ಟ್’ ಗಳು, ಮುಸ್ಲಿಂ ಸಂಘಟನೆಗಳು ದನಿಯೆತ್ತುವುದು ಬಿಡಿ, ಜೋರಾಗಿ ಕೆಮ್ಮುವುದು ಕೂಡಾ ಮಾಡುತ್ತಿಲ್ಲ.