ಇನ್ಮುಂದೆ ಟ್ರೂ ಕಾಲರ್ ಬೇಕಾಗಿಲ್ಲ, ಕರೆ ಬಂದ ತಕ್ಷಣ
ಫೋನ್ ಸ್ಕ್ರೀನ್ ಮೇಲೆ ಕಾಣಿಸಲಿದೆ ಕರೆ ಮಾಡಿದವರ ಡೀಟೇಲ್ಸ್
ನವದೆಹಲಿ: ದೂರಸಂಪರ್ಕ ಇಲಾಖೆ ಶೀಘ್ರವೇ ಹೊಸ ವ್ಯವಸ್ಥೆಯೊಂದನ್ನು ಹೊರತರಲಿದೆ. ಈ ವ್ಯವಸ್ಥೆಯಲ್ಲಿ ನಮಗೆ ಯಾರು ಕರೆ ಮಾಡುತ್ತಾರೋ ಅವರ KYC(ನೋ ಯುವರ್ ಕಸ್ಟಮರ್) ದಾಖಲೆ ನೀಡುವ ವೇಳೆ ಕೊಡುವ ಹೆಸರೇ ಫೋನ್ ಪರದೆ ಮೇಲೆ ಮೂಡುವಂತೆ ಮಾಡುತ್ತದೆ.
ಈಗ ಫೋನ್ ಬಳಕೆದಾರರು ಟ್ರೂಕಾಲರ್‌ನಂತಹ ಅಪ್ಲಿಕೇಶನ್‌ಗಳನ್ನು ಡೌನ್ ಲೋಡ್ ಮಾಡ್ಕೊಂಡು ಕರೆ ಮಾಡಿದವರ ಹೆಸರನ್ನು ತಿಳಿದುಕೊಳ್ಳುತ್ತಾರೆ. ಆದರೆ ಅದು ಶೇ.100 ರಷ್ಟು ಅಧಿಕೃತವಾಗಿರುವುದಿಲ್ಲ. ಆದರೆ ಈ ಹೊಸ ವ್ಯವಸ್ಥೆ KYC ಡೇಟಾದಿಂದ ಜನರ ಹೆಸರನ್ನು ತಿಳಿಸಲಿದೆ.
ಟೆಲಿಕಾಂ ಆಪರೇಟರ್‌ಗಳಿಗೆ ಜನರು KYC ದಾಖಲೆಯನ್ನು ನೀಡುವಾಗ ಯಾವ ಹೆಸರು ಕೊಡುತ್ತಾರೋ ಅದೇ ಹೆಸರು ಫೋನ್ ಪರದೆ ಮೇಲೆ ಕಾಣಿಸಲಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್) ಅಧ್ಯಕ್ಷ ವಘೇಲಾ ಮಾಹಿತಿ ನೀಡಿದ್ದಾರೆ.
ನಾವು ಫೋನ್ ನಂಬರ್ ಪಡೆಯುವಾಗ ನೀಡಿದ ದಾಖಲೆಯಲ್ಲಿ ನೀಡಿದ ಹೆಸರೇ ಕರೆಯ ಮಾಹಿತಿಯಲ್ಲಿ ಕಾಣಿಸುವಂತೆ ಮಾಡಲಿದ್ದು, ಈ ಸೇವೆ ಶೀಘ್ರವೇ ಆರಂಭವಾಗಲಿದೆ. ಇದರ ಪ್ರಕಾರ ಯಾರಾದರೂ ಕರೆ ಮಾಡಿದಾಗ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ KYC ದಾಖಲೆ ಪ್ರಕಾರವೇ ಅವರ ಹೆಸರು ಕಾಣಿಸಿಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ನಂಬರ್ ಸೇವ್ ಇಲ್ಲದೇ ಹೋದರೂ ಅದು ಕರೆ ಮಾಡಿದವರ ಹೆಸರು ತಿಳಿಸಲಿದೆ:
ನಿಮ್ಮ ಮೊಬೈಲ್‌ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿದಾಗ ಅಥವಾ ಸೇವ್ ಇಲ್ಲದ ನಂಬರ್‌ನಿಂದ ಕರೆ ಬಂದಾಗ, KYC ಆಧಾರದ ಮೇಲೆ ಅವರ ಹೆಸರು ತಿಳಿಯಬಹುದು.
ಈವರೆಗೆ ಟ್ರಾಯ್ ಯು ಸುಳ್ಳು ಕರೆ – ಸ್ಪ್ಯಾಮ್ ಅಥವಾ ಬೇಡದ ಕರೆಗಳನ್ನು ತಪ್ಪಿಸಲು ಹಲವಾರು ಕ್ರಮಗಳನ್ನು ಕೈಗೊಂಡಿತ್ತು. ಆದರೆ ಸ್ಪ್ಯಾಮ್ ಕರೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಇಲಾಖೆಗೆ ಸಾಧ್ಯವಾಗಿರಲಿಲ್ಲ. ಇದೀಗ ಬರಲಿರುವ ಹೊಸ ವಿಧಾನದಿಂದ ಸ್ಪ್ಯಾಮ್ ಕರೆಗಳನ್ನು ಜನರೇ ತಿಳಿದು ತಪ್ಪಿಸಲು ಸಾಧ್ಯವಾಗಲಿದೆ.