ಟಾಟಾ ಸ್ಟೀಲ್ ಕಂಪನಿಯಿಂದ ಉದ್ಯೋಗಿಗಳಿಗೆ ಹೊಸ ಆಫರ್ | ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ರೆ ನಿಮ್ಮ ಮಕ್ಕಳಿಗೆ ಉದ್ಯೋಗ ವರ್ಗಾವಣೆ ಮಾಡಲು ನಿಮಗಿದೆ ಅವಕಾಶ!
ಪ್ರತಿಯೊಂದು ಕಂಪನಿಯು ಇನ್ನೊಂದು ಕಂಪನಿಗಿಂತ ವಿಭಿನ್ನವಾಗಿ ಇರಲು ಬಯಸುತ್ತದೆ. ಹೀಗಾಗಿ ಉದ್ಯೋಗಿಗಳಿಗೆ ಹೊಸ ಹೊಸ ಆಫರ್ ಗಳನ್ನು ನೀಡುವ ಮೂಲಕ ತನ್ನತ್ತ ಸೆಳೆಯುತ್ತದೆ. ಇದೀಗ ಟಾಟಾ ಸ್ಟೀಲ್ ಕಂಪನಿಯು ಉದ್ಯೋಗಿಗಳಿಗೆ ಆರಂಭಿಕ ಬೇರ್ಪಡಿಕೆ ಮತ್ತು ಜಾಬ್ ಫಾರ್ ಜಾಬ್ ಸ್ಕೀಮ್ ನ್ನು ಘೋಷಿಸಿದೆ.
ನಿರ್ದಿಷ್ಟ ಅವಧಿಗೆ ಸೇವೆ ಸಲ್ಲಿಸಿದ ಉದ್ಯೋಗಿಗಳಿಗಾಗಿ ಆರಂಭಿಸಿದ ಈ ಯೋಜನೆಯನ್ನು, ಖುದ್ದು ಟಾಟಾ ಸ್ಟೀಲ್ ಉಪಾಧ್ಯಕ್ಷ ಅತ್ರಾಯಿ ಸನ್ಯಾಲ್ ಆದೇಶ ಹೊರಡಿಸಿದ್ದಾರೆ. ಟಾಟಾ ಸ್ಟೀಲ್, ಈ ಎರಡು ಯೋಜನೆಗಳನ್ನು ಸಂಯೋಜಿಸುವ ಮೂಲಕ ತನ್ನ ಹೆಸರನ್ನು ‘ಗೋಲ್ಡನ್ ಫ್ಯೂಚರ್ ಪ್ಲಾನ್’ ಎಂದು ಕರೆದಿದೆ.
ಏನಿದು ಜಾಬ್ ಫಾರ್ ಜಾಬ್ ಸ್ಕೀಮ್?
ಇದರ ಅಡಿಯಲ್ಲಿ ಉದ್ಯೋಗಿಗಳು ತಮ್ಮ ಮಗ, ಮಗಳು, ಅಳಿಯ ಅಥವಾ ಇನ್ನಾವುದೇ ಅವಲಂಬಿತರನ್ನು ಹೆಸರಿಸುವ ಮೂಲಕ ತಮ್ಮ ಉದ್ಯೋಗಗಳನ್ನು ವರ್ಗಾಯಿಸಲು ಅವಕಾಶವಿದೆ. ಈ ಜಾಬ್ ಫಾರ್ ಜಾಬ್ ಯೋಜನೆಯಡಿ ಉದ್ಯೋಗಿಗಳ ನಿವೃತ್ತಿ ವಯಸ್ಸು ಕನಿಷ್ಠ ಐದೂವರೆ ವರ್ಷಗಳಾಗಿದ್ದು, ನಂತರ ಅವರು ತಮ್ಮ ಉದ್ಯೋಗವನ್ನು ಮಗ, ಮಗಳು, ಅಳಿಯ ಅಥವಾ ಇತರ ಅವಲಂಬಿತರಿಗೆ ವರ್ಗಾಯಿಸಬಹುದಾಗಿದೆ. ಕೆಲಸ ವರ್ಗಾವಣೆ ಮಾಡುವ ಉದ್ಯೋಗಿಗೆ ಮಾಸಿಕ 13,000 ರೂಪಾಯಿ ಸಿಗುತ್ತದೆ. ಉದ್ಯೋಗಿಯ ವಯಸ್ಸು 40 ಆಗಿದ್ದರೆ ಅಥವಾ ಹತ್ತು ವರ್ಷಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡಿದವರು ಮಾತ್ರ ಉದ್ಯೋಗ ವರ್ಗಾವಣೆ ಮಾಡಲು ಅರ್ಹರಾಗಿರುತ್ತಾರೆ.
ಉದ್ಯೋಗಿಯು ನಿವೃತ್ತಿಯ ತನಕ ಅಸ್ತಿತ್ವದಲ್ಲಿರುವ ಮೂಲ ವೇತನ ಮತ್ತು ಡಿಎ ಪ್ರಯೋಜನವನ್ನು ಪಡೆಯುತ್ತಾನೆ. ಆದರೆ ವಸತಿ ಸೌಲಭ್ಯ ಸಿಗುವುದಿಲ್ಲ. ಉದ್ಯೋಗಿಗಳು ಕಂಪನಿಯ ನಿವಾಸದಲ್ಲಿ ಉಳಿಯಲು ಬಯಸಿದರೆ ಅವರು ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ. ಅಲ್ಲೇ ಉಳಿಯಲು 58 ವರ್ಷ ವಯಸ್ಸಿನವರೆಗೆ ಅವಕಾಶವಿರುತ್ತದೆ ಎಂದು ಕಂಪನಿ ತಿಳಿಸಿದೆ.
ಆದ್ರೆ ಈ ಉದ್ಯೋಗವನ್ನು ಪಡೆಯಲು ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಹೀಗಾಗಿ ಮೂರು ಬಾರಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ. ನಂತರ ಪ್ರಶಿಕ್ಷಣಾರ್ಥಿಯಾಗಿ ಅವರ ಸೇವೆ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಅವರಿಗೆ ಸ್ಟೈಫಂಡ್ ನೀಡಲಾಗುತ್ತದೆ. ಅಲ್ಲದೆ, ತರಬೇತಿ ಮುಗಿದ ನಂತರ ಅವರ ಸೇವೆಯನ್ನು ಖಾಯಂಗೊಳಿಸಲಾಗುವುದು. ಆದರೆ, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅವಲಂಬಿತರು ಕೆಲಸದಿಂದ ವಂಚಿತರಾಗುತ್ತಾರೆ. ಈ ಯೋಜನೆಯನ್ನು ಪಡೆಯಲು ಜೂನ್ 1 ರಿಂದ ಜೂನ್ 30 ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಕಂಪನಿ ತಿಳಿಸಿದೆ.