ಮಂಗಳೂರು : ನ್ಯಾಯಾಲಯದ ಡಿಕ್ರಿಯನ್ನು ಫೋರ್ಜರಿ!! | ಎಂಟು ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ
ಮಂಗಳೂರು: ಇಲ್ಲಿನ ನ್ಯಾಯಾಲಯದ ವಿವಾಹ ವಿಚ್ಛೇದನ ಡಿಕ್ರಿಯನ್ನು ಫೋರ್ಜರಿ ಮಾಡಿದ ಎಂಟು ವರ್ಷಗಳ ಹಿಂದಿನ ಪ್ರಕರಣವೊಂದು ಮರುಜೀವ ಪಡೆದುಕೊಂಡಿದೆ. ಈ ಪ್ರಕರಣದ ಬಗ್ಗೆ ಸಿ.ಐ.ಡಿ ತನಿಖೆ ಪೂರ್ಣಗೊಂಡಿದ್ದು ದೋಷಾರೋಪಣ ಪಟ್ಟಿ ಸಲ್ಲಿಸಿ, ಮಂಗಳೂರಿನ ವಕೀಲರು ಹಾಗೂ ಅವರ ಅಸಿಸ್ಟೆಂಟ್ ನನ್ನು ಆರೋಪಿಗಳೆಂದು ಗುರುತಿಸಲಾಗಿದೆ.
ಘಟನೆ ವಿವರ:2005 ರಲ್ಲಿ ಮಂಗಳೂರಿನ ವ್ಯಕ್ತಿಯೊಬ್ಬರು ತಾನು ಪ್ರೀತಿಸುತ್ತಿರುವ ಯುವತಿಯೊಬ್ಬಳೊಂದಿಗೆ ಮದುವೆಯಾಗುವ ಸಲುವಾಗಿ ಮೊದಲ ಪತ್ನಿಗೆ ಡಿವೋರ್ಸ್ ಕೊಡಲು ಬಯಸಿದ್ದರು. ಅದರಂತೆ ನಗರದ ವಕೀಲರೊಬ್ಬರನ್ನು ಸಂಪರ್ಕಿಸಿದ್ದು, ವಕೀಲರು ನ್ಯಾಯಾಲಯದಿಂದ ತೀರ್ಪು ತಂದು ಕೊಡುವ ಭರವಸೆಯನ್ನೂ ನೀಡಿದ್ದರು.
ಅದರಂತೆ ವಕೀಲರು ವಿವಾಹ ವಿಚ್ಛೇದನಕ್ಕೆ ಕೋರ್ಟ್ ಡಿಕ್ರಿ ಎಂದು ಸುಳ್ಳು ದಾಖಲೆಯೊಂದನ್ನು ಸೃಷ್ಟಿಸಿ ಆ ವ್ಯಕ್ತಿಗೆ ನೀಡಿದ್ದು, ದಾಖಲೆ ಕೈಗೆ ಸಿಕ್ಕ ಕೆಲ ವರ್ಷಗಳ ಬಳಿಕ ವ್ಯಕ್ತಿ ಮೃತಪಟ್ಟಿದ್ದರು. ಆ ಬಳಿಕ ಮೊದಲ ಹಾಗೂ ಎರಡನೇ ಪತ್ನಿಯ ನಡುವೆ ಆಸ್ತಿ ಹಂಚಿಕೆಯ ವಿಚಾರವಾಗಿ ತಕರಾರು ಎದ್ದಿದ್ದು, ಪ್ರಕರಣವು ಕೋರ್ಟ್ ಮೆಟ್ಟಿಲೇರಿದಾಗ ಎರಡನೇ ಪತ್ನಿಯು ಮೃತ ವ್ಯಕ್ತಿಗೆ ವಕೀಲರು ನೀಡಿದ್ದ ಸುಳ್ಳು ದಾಖಲೆಯನ್ನು ಕೋರ್ಟ್ ಗಮನಕ್ಕೆ ತಂದಿದ್ದರು.
ಇದನ್ನು ನ್ಯಾಯಾಲಯ ಪರಿಶೀಲಿಸಿದಾಗ ನಕಲಿ ದಾಖಲೆ ಎಂದು ತಿಳಿದುಬಂದಿದ್ದು, ಈ ರೀತಿಯ ಡಿಕ್ರಿಯನ್ನು ನ್ಯಾಯಾಲಯ ಹೊರಡಿಸಿಲ್ಲ ಎನ್ನುವ ವಿಚಾರ ಬಹಿರಂಗವಾಗಿ ಬಯಲಾಗಿತ್ತು.ಬಳಿಕ ಪ್ರಕರಣವು ಮಂಗಳೂರು ಉತ್ತರ ಠಾಣೆಯಲ್ಲಿ ವಿಚಾರಣೆ ನಡೆದಿದ್ದು,ಹೆಚ್ಚಿನ ತನಿಖೆಗಾಗಿ ಹೈಕೋರ್ಟ್ ಆದೇಶದಂತೆ ಪ್ರಕರಣವನ್ನು ಸಿ.ಐ.ಡಿ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿತ್ತು.
ಅದರಂತೆ ಮಂಗಳೂರಿನ ವಕೀಲರು ಹಾಗೂ ಅವರ ಗುಮಾಸ್ತ ತಪ್ಪಿತಸ್ಥ ಎಂದು ಸಿ.ಐ.ಡಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದು, ಸುಮಾರು ಎಂಟು ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ ಬಂದಂತಾಗಿದೆ.