ಮಂಗಳೂರು : ಹಳದಿ ರೋಗ ಬಾಧಿತ ಅಡಿಕೆ ತೋಟಗಳಲ್ಲಿ ಪರ್ಯಾಯ ಬೆಳೆ ಬೆಳೆಯಲು ₹ 3.25 ಕೋಟಿ ಪ್ಯಾಕೇಜ್!!!
ಮಂಗಳೂರು: ದ.ಕ.ಜಿಲ್ಲೆಯ ಹಳದಿ ರೋಗ
ಬಾಧಿತ ಅಡಿಕೆ ತೋಟಗಳಲ್ಲಿ ಪರ್ಯಾಯ ಬೆಳೆ ಬೆಳೆಯಲು ಮತ್ತು ರೋಗ ನಿಯಂತ್ರಣಕ್ಕೆ ಸಂಶೋಧನೆ ನಡೆಸಲು ರಾಜ್ಯ ಸರ್ಕಾರ ರೂ.3.25 ಕೋಟಿ ಮೊತ್ತದ ಪ್ಯಾಕೇಜ್ ಮಂಜೂರುಗೊಳಿಸಿದೆ.
ಹಳದಿ ರೋಗ ಬಾಧಿತ ಸುಳ್ಯ ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳಲ್ಲಿ ತೋಟಗಾರಿಕಾ ಇಲಾಖೆ ಎರಡು ವರ್ಷಗಳ ಹಿಂದೆ ಸಮೀಕ್ಷೆ ನಡೆಸಿ, 1217.38 ಹೆಕ್ಟೇರ್ ವಿಸ್ತೀರ್ಣದ ಅಡಿಕೆ ತೋಟ ರೋಗಕ್ಕೆ ತುತ್ತಾಗಿರುವುದನ್ನು ಗುರುತಿಸಿತ್ತು. ಇದರಿಂದ ಸುಮಾರು 5,588 ರೈತರು ತೊಂದರೆ ಒಳಗಾಗಿರುವುದನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು.
ರೈತರಿಗೆ ಆರ್ಥಿಕ ಸಾಮರ್ಥ್ಯ ಪರ್ಯಾಯ ಬೆಳೆ ಬೆಳೆಯಲು ಸಾಧ್ಯವಾಗದ ಕಾರಣ ಪ್ರೋತ್ಸಾಹಧನ ನೀಡಲು ಮತ್ತು ಈ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲು 718.28 ಕೋಟಿ ಮೊತ್ತದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು.
ಈ ವರದಿಯನ್ನು ಆಧರಿಸಿ ಮತ್ತು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದಂತೆ, ರೈತರು ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೈಲೆಟ್ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ.
ರೋಗ ಬಾಧಿತ ತೋಟದಲ್ಲಿ ಇಳುವರಿ ಕುಂಠಿತವಾಗಿ ಕ್ರಮೇಣ ಅಡಿಕೆ ಮರಗಳು ಸಾಯುತ್ತವೆ. ಹೀಗಾಗಿ, ಹಾಲಿ ಇರುವ ತೋಟಗಳ ನಡುವೆ ಪರ್ಯಾಯ ಬೆಳೆ ಪ್ರಾರಂಭಿಸಿದರೆ, ರೈತರ ಆದಾಯಕ್ಕೆ ಅನುಕೂಲವಾಗುತ್ತದೆ. ತಾಳೆ, ಬಾಳೆ, ರಾಂಬುಟಾನ್, ಮ್ಯಾಂಗೊಸ್ಟಿನ್, ತೆಂಗು ಅಥವಾ ರೈತರು ಆಸಕ್ತಿ ಹೊಂದಿರುವ ಇತರ ಯಾವುದೇ ಬೆಳೆಗಳನ್ನು ಬೆಳೆಸಬಹುದು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವೆಚ್ಚದ ನಿಯಮಾವಳಿಯ ಅನ್ವಯ ಪರ್ಯಾಯ ಬೆಳೆಗೆ ರೈತರು ವೆಚ್ಚ ಮಾಡುವ ಶೇ 50ರಷ್ಟನ್ನು ಸರ್ಕಾರ ನೀಡುತ್ತದೆ. ಉದ್ಯೋಗ ಕಾರ್ಡ್ ಇರುವ ಫಲಾನುಭವಿಗಳು ಉದ್ಯೋಗ ಖಾತ್ರಿಯಲ್ಲೂ ಈ ಯೋಜನೆ ಕಾರ್ಯಗತಗೊಳಿಸಬಹುದು. ಸಮೀಕ್ಷೆಯ ನಂತರ ಕೂಡ ಕೆಲವು ಪ್ರದೇಶಗಳಲ್ಲಿ ರೋಗಗಳು ಕಾಣಿಸಿಕೊಂಡಿರಬಹುದು. ಅಂತಹ ರೈತರು ಕೂಡ ಅರ್ಜಿ ನೀಡಬಹುದಾಗಿದ್ದು, ಅನುದಾನದ ಲಭ್ಯತೆ ಆಧರಿಸಿ, ಪರ್ಯಾಯ ಬೆಳೆ ಬೆಳೆಯಲು ಅವಕಾಶ ಮಾಡಿಕೊಡಲಾಗುತ್ತದೆ.