ಬ್ರಹ್ಮಾವರ : ಸುಟ್ಟು ಕರಕಲಾದ ಕಾರಿನಲ್ಲಿ ಪತ್ತೆಯಾಯ್ತು ಸಜೀವ ದಹನವಾಗಿದ್ದ ನವ ಜೋಡಿಯ ಶವ

ಬ್ರಹ್ಮಾವರ: ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡು ಸಜೀವ ದಹನವಾಗಿರುವ ಘಟನೆ ಮಂದಾರ್ತಿ ಸಮೀಪದ ಹೆಗ್ಗುಂಜ್ಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತೂರು ಎಂಬಲ್ಲಿ ಇಂದು ಮುಂಜಾನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಬೆಂಗಳೂರಿನ ಆರ್.ಟಿ.ನಗರದ ಯಶವಂತ್ (23) ಮತ್ತು ಜ್ಯೋತಿ (23) ಎಂದು ಗುರುತಿಸಲಾಗಿದೆ.

ಮೃತರು ನಿನ್ನೆ ಮಂಗಳೂರಿಗೆ ಬಂದು ಹುಸೇನ್ ಎಂಬವರಿಂದ ಸ್ವಿಫ್ಟ್ ಕಾರು ಬಾಡಿಗೆ ಪಡೆದು ಉಡುಪಿಗೆ ಬಂದಿದ್ದರು. ಆದರೆ, ಮುಂಜಾನೆ 3 ಗಂಟೆ ಸುಮಾರಿಗೆ ಸುಡುತ್ತಿದ್ದ ಕಾರು ಪತ್ತೆಯಾಗಿದೆ. ಸ್ಥಳೀಯರು ಬೆಂಕಿ ನಂದಿಸಿದಾಗ ಕಾರಿನೊಳಗೆ ಯುವಕ, ಯುವತಿ ಶವ ಪತ್ತೆಯಾಗಿದೆ.

ಯಶವಂತ್ ಮತ್ತು ಜ್ಯೋತಿ ಇದೇ ತಿಂಗಳು 18ರ ಮಧ್ಯಾಹ್ನ ಮನೆಯಿಂದ ತೆರಳಿದ್ದು, ಜ್ಯೋತಿ ಚೋಳನಾಯಕನಹಳ್ಳಿ ನಿವಾಸಿಯಾಗಿದ್ದಾರೆ, ಯಶವಂತ್ ಯಾದವ್ ಮುನಿಯಪ್ಪ ಲೇಔಟ್ ನಿವಾಸಿ. ಮೇ 19 ರಂದು ಹುಡುಗಿಯ ಪೋಷಕರು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಇನ್ನು ಯುವಕನ ಪೋಷಕರು ಮೇ 20ಕ್ಕೆ ದೂರು ದಾಖಲಿಸಿದ್ದರು. ಜ್ಯೋತಿ ಇಂಟರ್​​​ವ್ಯೂಗೆ ಹೋಗಿ ಬರುವುದಾಗಿ ಹೇಳಿ ಮನೆಗೆ ಬಂದಿಲ್ಲ. ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಮಗಳು ಸಿಗಲಿಲ್ಲ ಎಂದು ಯುವತಿ ತಾಯಿ ರತ್ನಮ್ಮ ದೂರು ನೀಡಿದ್ದರು. ಯುವಕನ ​​ ತಂದೆ ವೆಂಕಟರಮಣ ರಾವ್​, ಮಗ ಬೈಕ್​ನಲ್ಲಿ ಟ್ಯಾಲಿಕ್ಲಾಸ್​​ಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ. ಆದರೆ ಇನ್ನು ಬಂದಿಲ್ಲ ಎಂದು ಬೆಂಗಳೂರಿನ ಹೆಬ್ಬಾಳ ಠಾಣೆಯಲ್ಲಿ ದೂರು ನೀಡಿದ್ದರು.

ಈ ಯುವ ಜೋಡಿ ಆತ್ಮಹತ್ಯೆಗೂ ಮುನ್ನಾ, ಕುಟುಂಬಸ್ಥರಿಗೆ “ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ” ಎಂದು ಮೆಸೆಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣದ ಕುರಿತು ಇನ್ನಷ್ಟು ಮಾಹಿತಿ ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.

Leave A Reply