ಕಟ್ಟುನಿಟ್ಟಾಗಿ ಸಾರಿಗೆ ನಿಯಮ ಪಾಲನೆ ಮಾಡಿದ ಜಿಂಕೆ | ಮಾನವನಿಗಿರದ ವಿವೇಚನೆ ಪ್ರಾಣಿಗಳಿಗಿವೆ ಎಂದ ನೆಟ್ಟಿಗರು..!
ಸಾರಿಗೆ ನಿಗಮ ರಸ್ತೆ ಸುರಕ್ಷತೆಯ ನಿಯಮಗಳನ್ನು ಎಷ್ಟೇ ಕಟ್ಟು ನಿಟ್ಟಾಗಿ ಜಾರಿಗೆ ತಂದರೂ ಯಾರೂ ಅದನ್ನು ಸರಿಯಾಗಿ ಪಾಲಿಸುವುದಿಲ್ಲ. ರಸ್ತೆಯ ಎಡ, ಬಲ ಕಡೆಗಳಲ್ಲಿ ರಸ್ತೆ ದಾಟುವಿಕೆಯ ಬಗ್ಗೆ ಕೆಲವೊಂದು ಮಾರ್ಗಸೂಚಿಗಳನ್ನು ಹಾಕುತ್ತಾರೆ. ಆದರೆ ಜನ ಅವರಿಗಿಷ್ಟ ಬಂದ ಕಡೆ ರಸ್ತೆ ದಾಟಲು ಹೋಗಿ ಜೀವಕ್ಕೇ ಅಪಾಯ ತಂದೊಡ್ಡುತ್ತಾರೆ.
ಹಲವಾರು ಕಡೆ ಜೀಬ್ರಾ ಕ್ರಾಸಿಂಗ್ ಇರುತ್ತದೆ. ಇಲ್ಲೂ ಕೂಡಾ ಜನ ಅದರ ಮೇಲೆ ನಡೆದುಕೊಂಡು ದಾಟದೆ, ಎಲ್ಲೆಂದರಲ್ಲೋ ದಾಟುತ್ತಾರೆ. ಈ ಮೂಲಕ ರಸ್ತೆ ಸುರಕ್ಷತೆ ಕ್ರಮವನ್ನು ಸಂಪೂರ್ಣ ಉಲ್ಲಂಘಿಸುತ್ತಾರೆ. ಇದೀಗ, ರಸ್ತೆ ಸುರಕ್ಷತೆಯ ಬಗ್ಗೆ ಜನಸಾಮಾನ್ಯರಿಗೆ ಎಚ್ಚರಿಕೆ ನೀಡಲು ಯುಪಿ ಪೊಲೀಸರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋ ನೋಡಿದ್ರೆ ಮನುಷ್ಯರಿಗಿರದ ಬುದ್ಧಿ ಪ್ರಾಣಿಗಳಿಗಿವೆ ಎಂದೆನಿಸೋದು ಸುಳ್ಳಲ್ಲ. ಯುಪಿ ಪೊಲೀಸರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಜೀಬ್ರಾ ಕ್ರಾಸಿಂಗ್‌ನಲ್ಲಿ ಜಿಂಕೆಯೊಂದು ಕಾಣಿಸಿಕೊಂಡಿದೆ. ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗಿ ವಾಹನಗಳು ನಿಂತಾಗ ಮಾತ್ರ ಅದು ರಸ್ತೆ ದಾಟಿದೆ.
ಜೀವನವು ತುಂಬಾ ಅಮೂಲ್ಯ. ಸಂಚಾರ ನಿಯಮಗಳ ಉಲ್ಲಂಘಿಸುವವರು ಈ ಜಿಂಕೆಯನ್ನು ನೋಡಿ ಕಲಿಯಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸಲು ಪೊಲೀಸ್ ಇಲಾಖೆ ಜನರನ್ನು ಒತ್ತಾಯಿಸಿದ ಸೃಜನಶೀಲ ಮಾರ್ಗಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಜಿಂಕೆಗಳು ರಸ್ತೆ ಸುರಕ್ಷತೆಯನ್ನು ಅನುಸರಿಸುತ್ತವೆ. ನಾವು ಮನುಷ್ಯರು, ನಾವು ಅದನ್ನು ಏಕೆ ಅನುಸರಿಸಬಾರದು? ದಯವಿಟ್ಟು ರಸ್ತೆ ಸುರಕ್ಷತೆಯನ್ನು ಅನುಸರಿಸಿ ಮತ್ತು ಯಾವಾಗಲೂ ಸುರಕ್ಷಿತವಾಗಿ ಸವಾರಿ ಮಾಡಿ ಎಂದು ಬರೆದಿದ್ದಾರೆ.