ಪ್ರಾದೇಶಿಕ ಭಾಷೆಗಳ ಕುರಿತಾಗಿ ಪ್ರಧಾನಿ ಮೋದಿ ನೀಡಿದ ಹೇಳಿಕೆಗೆ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ!?
ಬೆಂಗಳೂರು: ಇತ್ತೀಚೆಗಷ್ಟೇ ಹಿಂದಿ ರಾಷ್ಟ್ರ ಭಾಷೆ ಹೌದೋ ಅಲ್ಲವೋ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ದೇಶಾದ್ಯಂತ ಭಾರೀ ಚರ್ಚೆ ನಡೆದಿತ್ತು. ಅಷ್ಟೇ ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ಮಧ್ಯೆ ಟ್ವೀಟ್‌ವಾರ್ ನಡೆದಿತ್ತು. ಇದೀಗ ಪ್ರಧಾನಿ ಮೋದಿಯವರು ಪ್ರಾದೇಶಿಕ ಭಾಷೆಗಳ ಕುರಿತಾಗಿ ಹೇಳಿಕೆ ನೀಡಿದ್ದು, ನಟ ಕಿಚ್ಚ ಸುದೀಪ್ ಸಂತೋಷ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸುದೀಪ್, ‘ಪ್ರಸ್ತುತ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ’ ಎಂದು ಹೇಳಿದ್ದರು. ಈ ಮಾತಿಗೆ ಬಾಲಿವುಡ್ ನಟ ಅಜಯ್ ದೇವಗನ್ ಕಿಡಿಕಾರಿದ್ದರು. ಇಬ್ಬರು ಸಿನಿಮಾ ಸ್ಟಾರ್‌ಗಳಾದ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ಮಾತು-ತಿರುಗೇಟಿನ ನಡುವೆ ‘ಹಿಂದಿ ರಾಷ್ಟ್ರ ಭಾಷೆ’ಯೇ ಎಂಬುದರ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಶುಕ್ರವಾರ ರಾಜಸ್ಥಾನದ ಜೈಪುರದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಮೋದಿ “ಕಳೆದ ಕೆಲವು ದಿನಗಳಿಂದ ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಗಳು ನಡೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ. ಬಿಜೆಪಿಯು ಪ್ರತಿಯೊಂದು ಭಾರತೀಯ ಭಾಷೆಯಲ್ಲಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವನ್ನು ನೋಡುತ್ತದೆ. ಪ್ರತಿಯೊಂದು ಭಾರತೀಯ ಭಾಷೆಯನ್ನು ಪೂಜ್ಯನೀಯವೆಂದು ಪರಿಗಣಿಸುತ್ತದೆ. ಅಷ್ಟೇ ಅಲ್ಲದೆ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವುದು ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ನಾವು ತೋರುವ ಬದ್ಧತೆಯನ್ನು ತೋರಿಸುತ್ತದೆ. ಬಿಜೆಪಿಯು ಭಾರತೀಯ ಭಾಷೆಗಳನ್ನು ಭಾರತೀಯತೆಯ ಆತ್ಮ ಮತ್ತು ದೇಶಕ್ಕೆ ಉತ್ತಮ ಭವಿಷ್ಯದ ಕೊಂಡಿ ಎಂದು ಪರಿಗಣಿಸುತ್ತದೆ” ಎಂದಿದ್ದಾರೆ.
ಎನ್‌ಡಿಟಿವಿ ಸಂದರ್ಶನದಲ್ಲಿ ಮಾತನಾಡಿರುವ ಸುದೀಪ್, “ನಾನು ಯಾವುದೇ ಗಲಭೆ ಅಥವಾ ಯಾವುದೇ ರೀತಿಯ ಚರ್ಚೆಯನ್ನು ಪ್ರಾರಂಭಿಸುವ ಉದ್ದೇಶ ಹೊಂದಿರಲಿಲ್ಲ. ಇದು ಯಾವುದೇ ಅಜೆಂಡಾ ಇಲ್ಲದೆ ಉಂಟಾಟ ವಾದ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿತ್ತು. ಇದೀಗ ಪ್ರಧಾನಿಯವರು ಆಡಿರುವ ಕೆಲವು ಸಾಲುಗಳು ಗೌರವ ಸೂಚಕವಾಗಿದೆ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
“ನಾನು ಕೇವಲ ಕನ್ನಡವನ್ನು ಪ್ರತಿನಿಧಿಸುತ್ತಿಲ್ಲ. ಪ್ರಧಾನಿಯವರ ಈ ಕೆಲವು ಹೇಳಿಕೆಗಳಿಂದ ಇಂದು ಪ್ರತಿಯೊಬ್ಬರ ಮಾತೃಭಾಷೆಯನ್ನು ಗೌರವಿಸಲಾಗಿದೆ. ನಾವು ನರೇಂದ್ರ ಮೋದಿ ಅವರನ್ನು ಕೇವಲ ರಾಜಕಾರಣಿಯಾಗಿ ನೋಡುವುದಿಲ್ಲ, ನಾಯಕರಾಗಿಯೂ ನೋಡುತ್ತೇವೆ. ಇನ್ನು ನಾನು ಯಾರೊಂದಿಗೂ ಜಗಳ ಮಾಡಲು ಇಷ್ಟಪಡುವುದಿಲ್ಲ. ಕೆಲವು ವಿಷಯಗಳು ಬಂದಾಗ ನನ್ನ ಅಭಿಪ್ರಾಯಗಳನ್ನು ಹೇಳುವ ಹಕ್ಕು ನನಗಿದೆ” ಎಂದು ಕಿಚ್ಚ ಸ್ಪಷ್ಟವಾಗಿ ಹೇಳಿದ್ದಾರೆ.
ತಮ್ಮ ಭಾಷೆಯನ್ನು ಗೌರವದಿಂದ ಕಾಣುವ ಪ್ರತಿಯೊಬ್ಬರಿಗೂ ಮೋದಿ ಅವರು ಪ್ರಾದೇಶಿಕ ಭಾಷೆಗಳ ಬಗ್ಗೆ ಮಾತನಾಡಿರುವ ಮಾತುಗಳು ಸಂತೋಷ ತರಿಸುತ್ತವೆ. ‘ನಾನು ಯಾರೊಂದಿಗೂ ಜಗಳಕ್ಕೆ ಪ್ರಯತ್ನಿಸುವುದಿಲ್ಲ. ಕೆಲವು ವಿಷಯಗಳು ಬಂದಾಗ ನನ್ನ ಅಭಿಪ್ರಾಯಗಳನ್ನು ಹೇಳುವ ಹಕ್ಕು ನನಗಿದೆ’ ಎಂದು ಸ್ಪಷ್ಟಪಡಿಸಿರುವ ಸುದೀಪ್, ‘ಹಿಂದಿ ಚಲನಚಿತ್ರೋದ್ಯಮಕ್ಕೆ ಅಭದ್ರತೆ ಕಾಡುತ್ತಿದೆ ಎಂಬ ಮಾತುಗಳನ್ನು ತಳ್ಳಿಹಾಕಿದ್ದಾರೆ.