ಬ್ರಿಗೇಡ್ ಕಾಂಪ್ಲೆಕ್ಸ್ ಗೆ ಮಧ್ಯಾಹ್ನ ಊಟಕ್ಕೆಂದು ಬಂದ ನವ ಪ್ರೇಮಿಗಳು : 4 ನೇ ಮಹಡಿಯಿಂದ ಕಾಲು ಜಾರಿ ಬಿದ್ದು ಯುವತಿ ಸಾವು, ಯುವಕನ ಸ್ಥಿತಿ ಗಂಭೀರ!

ಬೆಂಗಳೂರು : ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಬ್ರಿಗೇಡ್ ರೋಡ್‌ನ ಶಾಪಿಂಗ್ ಕಾಂಪ್ಲೆಕ್ಸ್ ಒಂದಕ್ಕೆ ಪ್ರೇಮಿಗಳು ಬಂದಿದ್ದು, ಕಾಂಪ್ಲೆಕ್ಸ್ ತುಂಬಾ ತಿರುಗಾಡುವಾಗ ಕಾಲು ಜಾರಿ ಬಿದ್ದಿದ್ದಾರೆ. ನಾಲ್ಕನೇ ಮಹಡಿಯ ಮೆಟ್ಟಿಲಿಂದ ಜಾರಿ ಬಿದ್ದು ಯುವತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಮತ್ತು ಯುವಕನ ಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

ಬೆಂಗಳೂರಿನ ಕೂಕ್‌ಟೌನ್‌ನ ನಿವಾಸಿ ಲಿಯಾ (18) ಮೃತಪಟ್ಟ ಯುವತಿ ಎಂದು ಪೊಲೀಸರು ಗುರುತಿಸಿದ್ದಾರೆ. ಇನ್ನು ಹುಡುಗ ಕೂಡ 18 ವರ್ಷದವನಾಗಿದ್ದು ಅವನ ಹೆಸರು ಕ್ರಿಸ್ ಪೀಟರ್ ಎಂದು ಗುರುತಿಸಲಾಗಿದೆ. ಹುಡುಗ ಬೆಂಗಳೂರಿನ ಎಚ್‌ಎಎಲ್ ನಿವಾಸಿಯಾಗಿದ್ದು, ಇಬ್ಬರೂ ಸೆಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಬ್ಬರೂ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಇಂದು ಮದ್ಯಾಹ್ನ ಊಟಕ್ಕೆಂದು ಬ್ರಿಗೇಡ್ ರಸ್ತೆಯ ಶಾಪಿಂಗ್ ಕಾಂಪ್ಲೆಕ್ಸ್ ಗೆ ಇಬ್ಬರೂ ಬಂದಿದ್ದು, ಅಲ್ಲಿ ಊಟ ಮುಗಿಸಿ, ವಾಶ್‌ರೂಂಗೆ ಕೈ ತೊಳೆಯಲು ಹೋಗಿದ್ದು, ಕೆಳಗೆ ಇಳಿಯುವಾಗ ಇಬ್ಬರೂ ಮೆಟ್ಟಿಲಿನಿಂದ ಜಾರಿ ಬಿದ್ದಿದ್ದಾರೆ. ಅಚಾನಕ್ಕಾಗಿ ಆದ ಈ ಘಟನೆಯಿಂದ ಅವರನ್ನು ಯಾರೂ ರಕ್ಷಿಸಲೂ ಸಾಧ್ಯವಾಗಲಿಲ್ಲ.

ಯುವತಿಯನ್ನು ಕೂಡಲೇ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಸ್ಪತ್ರೆ ತಲುಪುವುದರೊಳಗೆ ಆಕೆ ಮೃತಪಟ್ಟಿದ್ದಾಳೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ ಯುವತಿ ಮೊದಲು ಜಾರಿದ್ದಾಳೆ, ಅವಳನ್ನು ಹಿಡಿಯಲು ಹೋದ ಹುಡುಗ ಕೂಡ ಅವಳ ಜತೆಗೇ ಕೆಳಕ್ಕೆ ಬಿದ್ದಿದ್ದಾನೆ. ಕೆಳಗೆ ಬೀಳುವಾಗ ಯುವತಿಯ ಮೇಲೆ ಯುವಕ ಬಿದ್ದ ಕಾರಣ ಆತ ಜೀವಂತ ಉಳಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಗಿ ಸ್ಥಳದಲ್ಲೇ ಪ್ರಾಣ ಬಿಟ್ಟರೆ, ಕ್ರಿಸ್ ಪೀಟರ್ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.