ಮಾಂಸದೂಟ, ಗೋರಿಪೂಜೆ ಬಳಿಕ ಮತ್ತೊಂದು ವಿವಾದದ ಸುಳಿಯಲ್ಲಿ ದತ್ತಪೀಠ !! | ಆವರಣ ಹಾಗೂ ಗೋರಿಯ ಒಳಗಡೆ ನಮಾಜ್ ಮಾಡುವ ವೀಡಿಯೋ ವೈರಲ್
ದತ್ತಪೀಠದ ವಿವಾದಿತ ಸ್ಥಳ ಇತ್ತೀಚೆಗೆ ಭಾರಿ ಸುದ್ದಿಯಲ್ಲಿತ್ತು. ವಿವಾದಿತ ಸ್ಥಳದಲ್ಲಿ ಮಾಂಸದೂಟ, ಗೋರಿ ಪೂಜೆ ಮಾಡಿ ಬಹು ದೊಡ್ಡ ವಿವಾದ ಉಂಟಾಗಿತ್ತು. ಆ ಬಳಿಕ ಇದೀಗ ಮತ್ತೊಂದು ವಿವಾದ ಸೃಷ್ಟಿಯಾಗಿದ್ದು, ದತ್ತಪೀಠದ ಆವರಣದಲ್ಲಿ ನಮಾಜ್ ಮಾಡುವಂತೆ ಕಾಣುತ್ತಿರುವ ವೀಡಿಯೋವೊಂದು ಜಾಲತಾಣದಲ್ಲಿ ಹರಿದಾಡುತ್ತಿದೆ.
ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ದತ್ತಪೀಠದ ಆವರಣದಲ್ಲೇ ನಮಾಜ್ ಮಾಡುತ್ತಿದ್ದಾರೆ. ಆವರಣ ಮಾತ್ರವಲ್ಲ, ಗುಹೆಯ ಒಳಗೂ ನಮಾಜ್ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.
ಕೋರ್ಟ್ ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ಮುಜಾವರ್‌ರಿಂದ ಮಾತ್ರ ದತ್ತ ಪಾದುಕೆ, ಗೋರಿಗಳಿಗೆ ಪೂಜೆಗೆ ಅವಕಾಶ ನೀಡಿತ್ತು. ಆದರೆ, ಕೋರ್ಟ್ ಆದೇಶವನ್ನು ಗಾಳಿಗೆ ತೂರಿ ಪೂಜೆ ಸಲ್ಲಿಸಿದ್ದರು. ಕೋರ್ಟ್ ಆದೇಶದ ಅನ್ವಯ ಆವರಣ ಸೇರಿ ಗುಹೆ ಒಳಗೆ ಪ್ರಾರ್ಥನೆ, ನಮಾಜ್, ಪೂಜೆ ಸಲ್ಲಿಸಲು ಅವಕಾಶವಿಲ್ಲ.
ದತ್ತಪೀಠದ ಭಕ್ತರು ಸೇರಿದಂತೆ ಯಾರಿಗೂ ಯಾವುದೇ ಪೂಜೆ ಪುನಸ್ಕಾರಕ್ಕೆ ಅವಕಾಶವಿಲ್ಲ. ಆದರೂ ನಮಾಜ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ವೀಡಿಯೋ ನಿಜವೊ ಸುಳ್ಳೋ ಎನ್ನುವುದು ಅಧಿಕಾರಿಗಳ ಸ್ಪಷ್ಟನೆಯ ನಂತರವಷ್ಟೇ ತಿಳಿಯಬೇಕಿದೆ.