SSLC ಪಾಸಾಗಲ್ಲ ನೀ ಎಂದು ಹೇಳುತ್ತಿದ್ದ ಪೋಷಕರಿಗೆ ಜಸ್ಟ್ ಪಾಸಾಗಿ ತೋರಿಸಿ, ಮಳೆ ಲೆಕ್ಕಿಸದೇ ಕುಣಿದ ಬಾಲಕ!
ಇದು ಖುಷಿಯ ಕ್ಷಣ…16 ವರ್ಷದ ಈ ಹುಡುಗ ಆ ಕ್ಷಣವನ್ನು ಅನುಭವಿಸುತ್ತಿದ್ದಾನೆ. ಹಾಗಾಗಿ ಈ ಕುಣಿತ. ಇದು ಅಂತಿಂಥ ಖುಷಿಯಲ್ಲ. ಎಸ್ ಎಸ್ ಎಲ್ ಸಿ ಪಾಸಾಗಿದ್ದಕ್ಕೆ ಈತನ ಖುಷಿಯ ಪರಿಯ ಡ್ಯಾನ್ಸ್ ಇದು. ಅಷ್ಟಕ್ಕೂ ಆತ ತಗೊಂಡ ಮಾರ್ಕ್ಸ್ ಎಷ್ಟು ಗೊತ್ತೇ ? ಜಸ್ಟ್ ಪಾಸ್! ಹೌದು. ಜಸ್ಟ್ ಪಾಸ್ ಆಗಿದ್ದಕ್ಕೆ ಇಷ್ಟೊಂದು ಖುಷಿಯೇ? ಹೌದು. ಖುಷಿ ಪಟ್ಟ ಈ ಹುಡುಗ. ‘ನೀನು ಈ ಜನ್ಮದಲ್ಲಿ ಮೆಟ್ರಿಕ್ ಪರೀಕ್ಷೆ ಪಾಸಾಗಲಾರೆ!’ ಅಂತ ಅವನ ಮನೆಯವರೆಲ್ಲ ಹೇಳುತ್ತಿದ್ದರಂತೆ, ಅದಕ್ಕೆ ಪಾಸಾದ ಖುಷಿಯಲ್ಲಿ ಅಂತ ಅಮ್ಮಾ ನಾ ಪಾಸಾದೆ ಅಂತ ಈ ಕುಣಿತ…ಹೀರೋ ಅಂದರೆ ಇವನೇ ನೋಡಿ.
ಅವನಿಗೆ ಶ್ರೇಣಿಗಳ ಪರಿವೆ ಇಲ್ಲ. ಪಾಸಾಗಿರುವುದಕ್ಕೆ ಪಿಯು ವ್ಯಾಸಂಗಕ್ಕೆ ಯಾವ ಕಾಲೇಜು ಪ್ರವೇಶ ನೀಡೀತು ಎಂಬ ಯೋಚನೆಯೂ ಅವನಗಿಲ್ಲ.ಇದು ಆತನ ಖುಷಿಯ ಸಂಭ್ರಮ.
16-ವರ್ಷದ ಬಾಲಕ ಸಂತೋಷ ತಾಳಲಾರದೆ ಕುಣಿಯುತ್ತಿದ್ದಾನೆ. ಕೋವಿಡ್ ಪಿಡುಗಿನ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಮಕ್ಕಳು ಹೇಗೆ ಓದತ್ತಿದ್ದಾರೆ, ಎಷ್ಟು ಓದುತ್ತಿದ್ದಾರೆ ಅಂತ ಎಲ್ಲರಿಗೂ ಗೊತ್ತಿರುವ ವಿಷಯವೇ. ಅನೇಕ ಮಕ್ಕಳು ಈ ವರ್ಷ ಪಾಸಾಗಲಾರೆವು ಎಂಬ ಮನೋಭಾವದಂದಲೇ ಪರೀಕ್ಷೆಗಳಿಗೆ ಹಾಜರಾಗಿದ್ದರು. ಅಂಥವರಲ್ಲಿ ಈ ಹುಡುಗ ಕೊಪ್ಪಳ ಜಿಲ್ಲೆಯ ಕಾತರಕಿ ಗ್ರಾಮದ ಶಿವಕುಮಾರ ಕೂಡ ಒಬ್ಬ.
ನಮಗೆ ಗೊತ್ತಿದೆ. ಕೆಲ ಮಕ್ಕಳು 625 ಕ್ಕೆ 620 ಅಂಕ ಪಡೆದರೂ ದುಃಖಿಸುತ್ತಾರೆ. ರ್ಯಾಂಕ್ ಕೈತಪ್ಪಿದ್ದಕ್ಕೆ ಪರಿತಪಿಸುತ್ತಾರೆ. ಕೆಲವರು ಡಿಸ್ಟಿಂಕ್ಷನ್ ಬರಲಿಲ್ಲ ಅಂತ ಗೋಳಾಡುತ್ತಾರೆ. ಪ್ರಥಮ ದರ್ಜೆಯಲ್ಲಿ ಪಾಸಾಗಲಿಲ್ಲ ತಮ್ಮನ್ನು ತಾವು ಶಪಿಸಿಕೊಳ್ಳುವವರೂ ಇದ್ದಾರೆ.
ಫಲಿತಾಂಶದಲ್ಲಿ ಶಿವರಾಜ್ ಪಾಸ್ ಎಂದು ಬಂದಿದೆ. ಇದನ್ನು ನೋಡಿದ ಶಿವರಾಜ್ ಖುಷಿಗೆ ಪಾರವೇ ಇಲ್ಲದಂತಾಗಿದೆ. ಸಮಯಕ್ಕೆ ಸರಿಯಾಗಿ ಮಳೆ ಕೂಡಾ ಹುಯ್ದಿದೆ.ಆಗ ಆತ ಮಳೆಯಲ್ಲಿಯೇ ಕುಣಿದು ಕುಪ್ಪಳಿಸುತ್ತಾ ನಾನು ಪಾಸ್ ಆದೆ ಎಂದು ಕಿರುಚುತ್ತಾ ಕುಣಿದಾಡಿದ್ದಾನೆ. ಇದನ್ನು ಮನೆಯಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಸದ್ಯ ಈ ವೀಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹೆಚ್ಚು ಅಂಕ ಬಂದಿಲ್ಲ ಎಂದು ಕೊರಗುವವರಿಗೆ ಶಿವರಾಜ್ ಇವತ್ತಿನ ತಾಜಾ ಮಾದರಿಯಾಗಿದ್ದಾನೆ.
ಅದೇನೆ ಇರಲಿ ಈ ಹುಡುಗನ ಬದುಕಿನ ಧೋರಣೆ ಇಷ್ಟವಾಗುತ್ತದೆ. ನಮಗಿರುವಷ್ಟರಲ್ಲಿ ಸಂತೃಪ್ತಿ ಕಂಡುಕೊಳ್ಳುವ ಪರಿ ಇದು. ಇದು ಬದುಕಿನುದ್ದಕ್ಕೂ ಇರಲಿ. ಸುರಿಯುತ್ತಿರುವ ಮಳೆ ಲೆಕ್ಕಿಸದೆ ಮೈ ಮರೆತು ಕುಣಿಯುತ್ತಿರುವ ಈ ಬಾಲಕ ಶಿವಕುಮಾರನ ಮುಂದಿನ ಬಾಳು ಹಸನಾಗಲಿ, ಬೆಳಗಲಿ.