ನೀರಿನಲ್ಲಿ ಮುಳುಗುತ್ತಿದ್ದ ಚಿಗರೆಯನ್ನು ಕಂಡು ಸಹಾಯಕ್ಕಾಗಿ ಘೀಳಿಟ್ಟ ಆನೆ -ವೀಡಿಯೋ ವೈರಲ್
ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎಂಬ ಮಾತಿದೆ. ತನ್ನವರು ಸಂಕಷ್ಟಕ್ಕೆ ಸಿಲುಕಿದಾಗ ಪ್ರಾಣಿಗಳು ಕೂಡ ಸಹಾಯಕ್ಕೆ ಮುಂದಾಗುತ್ತವೆ. ಒಂದು ವೇಳೆ ತಮ್ಮಿಂದ ಸಹಾಯ ಮಾಡಲು ಸಾಧ್ಯವಿಲ್ಲವೆಂದು ತಿಳಿದಾಗ ಮತ್ತೊಬ್ಬರ ಸಹಾಯಕ್ಕಾಗಿ ಬೇಡುತ್ತವೆ. ಇಂಥದ್ದೇ ಸನ್ನಿವೇಶವೊಂದು ಗ್ವಾಟೆಮಾಲಾದ ಮೃಗಾಲಯದಲ್ಲಿ ನಡೆದಿದೆ.
ನೀರಿನಲ್ಲಿ ಚಿಗರೆಯೊಂದು ಮುಳುಗುತ್ತಿತ್ತು. ಇದನ್ನು ನೋಡಿದ ಆನೆ ತಕ್ಷಣ ಜಾಗರೂಕವಾಗಿ ಸಹಾಯಕ್ಕಾಗಿ ಇತರರನ್ನು ಕರೆದಿದೆ. ಮೃಗಾಲಯದ ಸಂದರ್ಶಕರಾದ ಮಾರಿಯಾ ಡಯಾಜ್ ಅವರು ಹಂಚಿಕೊಂಡ ವೀಡಿಯೊದ ಪ್ರಕಾರ, ಗ್ವಾಟೆಮಾಲಾ ನಗರದ ಲಾ ಅರೋರಾ ಮೃಗಾಲಯದಲ್ಲಿ ತೊಂದರೆಯಲ್ಲಿರುವ ಚಿಗರೆಯನ್ನು ಗಮನಿಸಿದ ತಕ್ಷಣ ಏಷ್ಯನ್ ಆನೆಯು ಜೋರಾಗಿ ಘೀಳಿಟ್ಟು ಸಹಾಯಕ್ಕಾಗಿ ಇತರರಿಗೆ ಮೊರೆಯಿಟ್ಟಿದೆ.
ಆನೆಯು ತನ್ನ ಸೊಂಡಿಲನ್ನು ಹೆಣಗಾಡುತ್ತಿರುವ ಚಿಗರೆಯ ಕಡೆಗೆ ಬೀಸುತ್ತಿರುವುದನ್ನು ಕೂಡ ದೃಶ್ಯದಲ್ಲಿ ಕಾಣಬಹುದು. ಆನೆಯ ಕೂಗನ್ನು ಕೇಳಿ ತಕ್ಷಣವೇ ಅಲರ್ಟ್ ಆದ ಝೂ ಕೀಪರ್ ನೀರಿನ ಕಡೆಗೆ ಓಡಿ ಜಿಗಿದು ಭಯಭೀತವಾಗಿದ್ದ ಚಿಗರೆಯನ್ನು ರಕ್ಷಿಸಿದ್ದಾರೆ.
ಆನೆಗಳು ಹೆಚ್ಚು ಸಹಾನುಭೂತಿ ಹೊಂದಿರುವ ಪ್ರಾಣಿಗಳು. ನಿರ್ದಿಷ್ಟವಾಗಿ ಏಷ್ಯಾದ ಆನೆಗಳು ತೊಂದರೆಗೊಳಗಾದವರಿಗೆ ಸಹಾನುಭೂತಿ ತೋರಿಸಿವೆ ಮತ್ತು ಮೊದಲು ಸಂದರ್ಭಗಳ ಬಗ್ಗೆ ಮಾನವರನ್ನು ಎಚ್ಚರಿಸುತ್ತವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.