ಪ್ರತ್ಯೇಕ ಕೊಠಡಿಯಿಲ್ಲದೆ ಒಂದೇ ಬೋರ್ಡ್ ನಲ್ಲಿ ಶಿಕ್ಷಕರಿಂದ ಏಕಕಾಲದಲ್ಲಿ ಎರಡು ಭಾಷೆಗಳ ಬೋಧನೆ – ವೀಡಿಯೋ ವೈರಲ್
ಶಾಲೆಯೊಂದರಲ್ಲಿ ಇಬ್ಬರು ಶಿಕ್ಷಕರು ಒಂದೇ ತರಗತಿಯ ಕೊಠಡಿಯಲ್ಲಿ ಏಕಕಾಲದಲ್ಲಿ ಮಕ್ಕಳಿಗೆ ಬೋರ್ಡ್ ಮೇಲೆ ಹಿಂದಿ ಹಾಗೂ ಉರ್ದು ಕಲಿಸುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಿಹಾರದ ಶಾಲೆಯೊಂದರ ತರಗತಿಯಲ್ಲಿ ಕೆಲವು ಮಕ್ಕಳು ಮಾತ್ರ ಪಾಠ ಕೇಳುತ್ತಿದ್ದಾರೆ. ಮತ್ತೆ ಕೆಲವು ಮಕ್ಕಳು ಗಲಾಟೆ ಮಾಡುತ್ತಿದ್ದು, ಬೋರ್ಡ್ ಎದುರು ಹಿರಿಯ ಶಿಕ್ಷಕಿಯೊಬ್ಬರು ಕುಳಿತುಕೊಂಡು ಮಕ್ಕಳನ್ನು ಗಲಾಟೆ ಮಾಡದಂತೆ ಬೆತ್ತದಲ್ಲಿ ಮೇಜಿಗೆ ಹೊಡೆಯುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿದ ಹಿಂದಿ ಶಿಕ್ಷಕಿ ಪ್ರಿಯಾಂಕಾ ಅವರು, 2017ರಲ್ಲಿ ಶಿಕ್ಷಣ ಇಲಾಖೆಯು ಉರ್ದು ಪ್ರಾಥಮಿಕ ಶಾಲೆಯನ್ನು ನಮ್ಮ ಶಾಲೆಗೆ ಸ್ಥಳಾಂತರಿಸಿದೆ. ನಮ್ಮ ಶಾಲೆಯಲ್ಲಿ ಸಾಕಷ್ಟು ಕೊಠಡಿಗಳಿಲ್ಲದ ಕಾರಣ, ಒಂದೇ ಬೋರ್ಡ್‍ನನ್ನು ಎರಡು ಭಾಗ ಮಾಡಿಕೊಂಡು ಹಿಂದಿ ಹಾಗೂ ಉರ್ದು ಶಿಕ್ಷಕರು ಏಕಕಾಲದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಬಿಹಾರದ ಕತಿಹಾರ್‍ನಲ್ಲಿರುವ ಆದರ್ಶ್ ಮಿಡಲ್ ಸ್ಕೂಲ್ ಪರಿಸ್ಥಿಯ ಬಗ್ಗೆ ಮಾತನಾಡಿದ ಜಿಲ್ಲಾ ಶಿಕ್ಷಣಾಧಿಕಾರಿ ಕಾಮೇಶ್ವರ ಗುಪ್ತಾ ಅವರು, ಆದರ್ಶ ಮಿಡಲ್ ಸ್ಕೂಲ್‍ನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾದರೆ ಉರ್ದು ಪ್ರಾಥಮಿಕ ಶಾಲೆಗೆ ಒಂದು ಕೊಠಡಿ ನೀಡಲಾಗುವುದು. ಎಲ್ಲ ಮಕ್ಕಳಿಗೂ ಒಂದೇ ಕೊಠಡಿಯಲ್ಲಿ ಒಂದೇ ಬೋರ್ಡ್ ನಲ್ಲಿ ಪಾಠ ಮಾಡುವುದು ಒಳ್ಳೆಯದಲ್ಲ ಎಂದಿದ್ದಾರೆ.