ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಮೂರು ದಿನ ಭಾರೀ ಮಳೆ ಸಾಧ್ಯತೆ!! ಅರೇಂಜ್ ಹಾಗೂ ರೆಡ್ ಅಲರ್ಟ್ ಘೋಷಣೆ
ಮಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಸಮೀಕ್ಷೆಯಂತೆ ಇಂದು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಭಾರೀ ಗುಡುಗು ಸಹಿತ ಮಳೆಯಾದ ಬಗ್ಗೆ ವರದಿಯಾಗಿದೆ.
ಮುಂಜಾನೆಯಿಂದ ತುಸು ಮೋಡ ಕವಿದ ಬಿಸಿಲಿನ ವಾತಾವರಣ ಕಂಡುಬಂದಿತ್ತಾದರೂ, ಮಧ್ಯಾಹ್ನ ಕಳೆಯುತ್ತಲೇ ಗುಡುಗು ಸಹಿತ ಮಿಂಚಿನೊಂದಿಗೆ ಮಳೆರಾಯಣ ಆಗಮನವಾಗಿದ್ದು, ಕೆಲವೆಡೆಗಳಲ್ಲಿ ವಿದ್ಯುತ್, ಮನೆ, ವಾಹನಗಳಿಗೂ ಹಾನಿಯಾಗಿದೆ.
ಜಿಲ್ಲೆಯಾದ್ಯಂತ ಮೇ 17 ಮತ್ತು 19ರಂದು ಅರೇಂಜ್ ಅಲರ್ಟ್ ಹಾಗೂ ಮೇ 18 ರಂದು ತೀವ್ರ ಮಳೆಯಾಗಲಿರುವ ಕಾರಣ ರೆಡ್ ಅಲರ್ಟ್ ಘೋಷಿಸಲಾಗಿದ್ದು,ಮಳೆಯ ತೀವ್ರತೆ ಹೆಚ್ಚಿರುವ ಕಾರಣ ಜಿಲ್ಲಾ ವಿಪತ್ತು ನಿರ್ವಹಣಾ ಕಾರ್ಯಪಡೆಯು ಈಗಾಗಲೇ ಮುಂಜಾಗ್ರತ ಕ್ರಮ ಕೈಗೊಳ್ಳಲು ಮುಂದಾಗಿದೆ.
ಅದಲ್ಲದೇ ಮೀನುಗಾರಿಕೆಗೂ ಮಳೆರಾಯ ಅಡ್ಡಿ ಪಡಿಸಿದ್ದು, ಮೇಲಿನ ಮೂರು ದಿನಾಂಕಗಳಂದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.ಇನ್ನು ಪ್ರವಾಸಿಗರು ನದಿ-ಸಮುದ್ರ ತೀರಕ್ಕೆ ತೆರಳದಂತೆ ಈಗಾಗಲೇ ಸೂಚಿಸಲಾಗಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಪರಿಸ್ಥಿತಿ ಅವಲೋಕಿಸಲು ಆದೇಶಿಸಲಾಗಿದೆ.