ಜ್ಞಾನವ್ಯಾಪಿ ಮಸೀದಿಯ ಸಮೀಕ್ಷೆ ಮುಕ್ತಾಯ | ದೇವಾಲಯವಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಮಸೀದಿಯ ಕೊಳದಲ್ಲಿ ಪತ್ತೆಯಾಗಿದೆಯಂತೆ ಶಿವಲಿಂಗ !!
ದೇಶದಲ್ಲೆಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ವಾರಣಾಸಿಯ ಜ್ಞಾನವ್ಯಾಪಿ ಮಸೀದಿ ಸಂಕೀರ್ಣದ ವೀಡಿಯೋ ಸಹಿತ ಮೂರನೇ ದಿನದ ಸಮೀಕ್ಷೆಯು ಇಂದು ಮುಕ್ತಾಯವಾಗಿದ್ದು, ಮಸೀದಿ ಸಂಕೀರ್ಣದೊಳಗಿನ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಸಮೀಕ್ಷಾ ಸಮಿತಿ ತಂಡದ ಸದಸ್ಯ ವಕೀಲ ಸುಭಾಷ್ ನಂದನ್ ಚತುರ್ವೇದಿ ಹೇಳಿದ್ದಾರೆ.
ಮಸೀದಿಯಲ್ಲಿದ್ದ ನಂದಿಯ ಎದುರಿನ ಕೊಳದಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ. ಕೊಳದೊಳಗೆ ಪತ್ತೆಯಾದ ಶಿವಲಿಂಗ 12 ಅಡಿ, 8 ಇಂಚು ವ್ಯಾಸ ಹೊಂದಿದೆ ಎಂದು ತಿಳಿದುಬಂದಿದೆ.
ಸಮೀಕ್ಷಾ ಸಮಿತಿ ಇಂದು ತನ್ನ ಕಾರ್ಯವನ್ನು ಪೂರ್ಣಗೊಳಿಸಿದ್ದು, ಸಮೀಕ್ಷೆಯಲ್ಲಿ ಎಲ್ಲಾ ಸ್ಥಳಗಳನ್ನು ವಿವರವಾಗಿ ಚಿತ್ರೀಕರಿಸಲಾಗಿದೆ. ಮೂರು ಗುಮ್ಮಟಗಳು, ಭೂಗತ ನೆಲಮಾಳಿಗೆಗಳು, ಕೊಳ ಎಲ್ಲವನ್ನೂ ವೀಡಿಯೋ ರೆಕಾರ್ಡ್ ಮಾಡಲಾಗಿದೆ. ನಾಳೆ ಅಲಹಾಬಾದ್ ನ್ಯಾಯಾಲಯಕ್ಕೆ ವಕೀಲ ಕಮಿಷನರ್ ತಮ್ಮ ವರದಿಯನ್ನು ಸಲ್ಲಿಸಲಿದ್ದಾರೆ.
ಇಂದು ಮೂವರು ಆಯೋಗದ ಸದಸ್ಯರು ವರದಿಯನ್ನು ಸಮಯಕ್ಕೆ ಪೂರ್ಣಗೊಳಿಸದಿದ್ದರೆ ನಾವು ನ್ಯಾಯಾಲಯವನ್ನು ಹೆಚ್ಚು ಸಮಯ ಕೇಳುತ್ತೇವೆ ಎಂದು ಸರ್ಕಾರಿ ವಕೀಲ ಮಹೇಂದ್ರ ಪ್ರಸಾದ್ ಪಾಂಡೆ ತಿಳಿಸಿದ್ದಾರೆ. ಇಡೀ ಪ್ರಕ್ರಿಯೆಯು ಶಾಂತಿಯುತವಾಗಿತ್ತು ಎಂದು ಕೂಡ ಹೇಳಿದರು.
ಭಾನುವಾರದವರೆಗೆ ಶೇ 65ರಷ್ಟು ಸಮೀಕ್ಷೆ ಪೂರ್ಣಗೊಂಡಿತ್ತು. ಜನರು ಆ ಸ್ಥಳದ ಬಳಿ ಹೋಗದಂತೆ ತಡೆಯಲು ಆ ಜಾಗವನ್ನು ಸೀಲ್ ಮಾಡಿ ಎಂದು ವಾರಣಾಸಿ ಜಿಲ್ಲಾ ಕೋರ್ಟ್ ಆದೇಶ ಪ್ರಕಟಿಸಿದೆ.