ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ !! | ಮೇ 20 ರಂದು ಚುನಾವಣೆ, ನೌಕರರಿಗೆ ಸರ್ಕಾರಿ ರಜೆ ಘೋಷಣೆ
ರಾಜ್ಯ ಚುನಾವಣಾ ಆಯೋಗವು 2022ರ ಏಪ್ರಿಲ್ ನಿಂದ ಜುಲೈ ಅವಧಿಯಲ್ಲಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯತ್ ಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಇಂದು ಘೋಷಣೆ ಮಾಡಿದೆ.
ಅಲ್ಲದೆ, ಗ್ರಾಮ ಪಂಚಾಯತ್ ಗಳಲ್ಲಿ ವಿವಿಧ ಕಾರಣಗಳಿಂದ ತೆರುವಾಗಿರುವ ಸ್ಥಾನಗಳಿಗೆ ಉಪ ಚುನಾವಣೆಯನ್ನು ಮತ್ತು ಅವಧಿ ಮುಕ್ತಾಯವಾಗಿರುವ ಒಂದು ನಗರ ಸ್ಥಳೀಯ ಸಂಸ್ಥೆಗೆ ಸಾರ್ವತ್ರಿಕ ಚುನಾವಣೆಯನ್ನು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತೆರವಾಗಿರುವ ಖಾಲಿ ಸ್ಥಾನಗಳಿಗೆ ಉಪ ಚುನಾವಣೆಯನ್ನು ಸಹ ಚುನಾವಣಾ ಆಯೋಗ ಘೋಷಿಸಿದೆ. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ, ಮೇ 20, 2022 ಶುಕ್ರವಾರದಂದು ಮತದಾನ ನಡೆಯಲಿದೆ ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಧಾರವಾಡ ಜಿಲ್ಲೆಯ ಚಾಕಲಬ್ಬಿ, ಬೆಂಗಳೂರು ನಗರ ಜಿಲ್ಲೆಯ ಕಗ್ಗಲೀಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ಯಾಮಗೊಂಡ್ಲು, ಬಾಗಲಕೋಟೆ ಜಿಲ್ಲೆ ಸಾವಳಗಿ ಗ್ರಾಮ ಪಂಚಾಯಿತಿಗಳ 105 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಲ್ಲದೆ, ತುಮಕೂರು ಜಿಲ್ಲೆ ಶಿರಾ ನಗರಸಭೆಯ 21 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ದಾವಣಗೆರೆ ಮಹಾನಗರ ಪಾಲಿಕೆಯ 2 ಚನ್ನಗಿರಿ ಪುರಸಭೆಯ 1,ಆನೆಕಲ್ ಪುರಸಭೆಯ 3, ಹೊಳೆನರಸೀಪುರ, ಜೇವರ್ಗಿ ಮತ್ತು ಸಂಕೇಶ್ವರ ಪುರಸಭೆಯ ತಲಾ 1 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಮತ್ತು ಅನುದಾನ ರಹಿತ ವಿದ್ಯಾಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರೆ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕಾ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಕಾಯಂ ಅಥವಾ ದಿನಗೂಲಿ ಮೇಲೆ ಕರ್ತವ್ಯ ನಿರ್ವಹಿಸುವ ಅರ್ಹ ಮತದಾರ ನೌಕರರಿಗೆ ಮೇ 20 ರಂದು ಮತದಾನ ಮಾಡಲು ರಜೆ ಘೋಷಿಸಲಾಗಿದೆ.