CBSE : ಪಾಲಕರೇ ನಿಮಗೆ ಒಂದೇ ಹೆಣ್ಣುಮಗುವಿದ್ದರೆ ರೂ.12,000 ಸ್ಕಾಲರ್ಶಿಪ್ ಲಭ್ಯ! ಅರ್ಜಿ ಸಲ್ಲಿಕೆ ಹೇಗೆ?
ಆರ್ಥಿಕವಾಗಿ ಸ್ಥಿರವಾಗಿಲ್ಲದ ಮತ್ತು ಸರಿಯಾದ ಶಿಕ್ಷಣ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ನೆರವು ನೀಡುವ ಸಲುವಾಗಿ ಈ ಯೋಜನೆ ಆರಂಭಿಸಲಾಗಿದೆ. ಆರ್ಥಿಕವಾಗಿ ಸಬಲರಲ್ಲದ ಕುಟುಂಬಗಳ ಹೆಣ್ಣುಮಕ್ಕಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು. ಇದನ್ನು ಮನಗಂಡ ಸರ್ಕಾರ CBSE ಮೂಲಕ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವು ನೀಡುತ್ತಿದೆ. ಈ ಯೋಜನೆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.
ಈ ಮೂಲಕ ಅವರ ಕುಟುಂಬದ ಆರ್ಥಿಕ ಹೊರೆಯನ್ನೂ ಕಡಿಮೆ ಮಾಡಿದಂತಾಗುತ್ತದೆ. ಆದರೆ, ಈ ಯೋಜನೆಯಡಿ ವಿದ್ಯಾರ್ಥಿವೇತನ ಪಡೆಯಲು 10ನೇ ತರಗತಿಯಲ್ಲಿ ವಿದ್ಯಾರ್ಥಿನಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
ಇದು ಕೇಂದ್ರ ಸರ್ಕಾರದ ಯೋಜನೆ. ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿವೇತನವಾಗಿದೆ. ಈ ಯೋಜನೆಯಡಿ ದೇಶಾದ್ಯಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅರ್ಹತಾ ಮಾನದಂಡ ಅಥವಾ ಮೆರಿಟ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಹೆಣ್ಣು ಮಗುವಿನ 10ನೇ ತರಗತಿಯ ನಂತರ ಮುಂದಿನ ಶಿಕ್ಷಣಕ್ಕಾಗಿ ಈ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಬೇಕಾಗುವ ದಾಖಲೆಗಳು : ಅರ್ಜಿ ಸಲ್ಲಿಸಲು ಕುಟುಂಬದ ಆದಾಯ ಪ್ರಮಾಣಪತ್ರವು ಅವಶ್ಯ. ಜಾತಿ ಪ್ರಮಾಣಪತ್ರ ಸಲ್ಲಿಸುವುದು ಕೂಡ ಅಗತ್ಯವಾಗಿದೆ.
ವಿದ್ಯಾರ್ಥಿವೇತನದ ಮೊತ್ತ ಪಡೆಯಲು ಅಭ್ಯರ್ಥಿಯು ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕು.
ಬೋಧನಾ ಶುಲ್ಕ/ ಶಾಲಾ ಶುಲ್ಕದ ವಿವರಗಳನ್ನು
ದೃಢೀಕರಿಸಿದ ದಾಖಲೆಗಳೊಂದಿಗೆ ಭರ್ತಿ ಮಾಡಬೇಕು.
ಅಭ್ಯರ್ಥಿಯ ಫೋಟೋ ಮೇಲೆ ಸಹಿ ಮಾಡಿ ಅದನ್ನು ಸ್ಕ್ಯಾನ್ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅಪ್ಲೋಡ್ ಮಾಡಬೇಕು. ಶಾಲೆಯ ಗುರುತಿನ ಚೀಟಿಯ ಪ್ರತಿಯನ್ನು ಸಹ ದೃಢೀಕರಿಸಬೇಕು.
ವಿದ್ಯಾರ್ಥಿವೇತನದ ನವೀಕರಣಕ್ಕಾಗಿ 11 ನೇ ತರಗತಿಯ ಮಾರ್ಕ್ ಶೀಟ್ ಕಡ್ಡಾಯ ದಾಖಲೆಯಾಗಿದೆ.
ಬ್ಯಾಂಕ್ ಖಾತೆಯ ವಿವರಗಳೊಂದಿಗೆ, ಬ್ಯಾಂಕ್ ಪಾಸ್ಬುಕ್ನ ಜೆರಾಕ್ಸ್ ಮತ್ತು ಕ್ಯಾನ್ಸಲ್ ಚೆಕ್ ಜತೆಗೆ ಅಫಿಡವಿಟ್ ಸಲ್ಲಿಸಬೇಕು.
ಯೋಜನೆಯ ಪ್ರಯೋಜನ : 10ನೇ ತರಗತಿಯಲ್ಲಿ ಕನಿಷ್ಠ ಶೇ. 60 ಅಂಕ ಗಳಿಸುವ ಹುಡುಗಿಯರಿಗೆ ಮಾತ್ರ ಈ ಯೋಜನೆಯಡಿ ವಿದ್ಯಾರ್ಥಿವೇತನ ಪಡೆಯಲು ಸಾಧ್ಯ. ಅಭ್ಯರ್ಥಿಗಳು ತಮ್ಮ ಉನ್ನತ ವ್ಯಾಸಂಗಕ್ಕಾಗಿ ಪ್ರಯೋಜನ ತೆಗೆದುಕೊಳ್ಳಬಹುದು. ಈ ವಿದ್ಯಾರ್ಥಿವೇತನವು ಎರಡು ವರ್ಷಗಳ ಅವಧಿಗೆ ನೀಡಲಾಗುತ್ತದೆ. ಒಂದು ವರ್ಷದ ನಂತರ 11ನೇ ತರಗತಿ ಮುಗಿದ ನಂತರ 12ನೇ ತರಗತಿಗೆ ವಿದ್ಯಾರ್ಥಿವೇತನ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು. ಎರಡು ವರ್ಷಗಳಿಗೆ (11 ಮತ್ತು 12ನೇ ತರಗತಿ) ಒಟ್ಟು 12 ಸಾವಿರ ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುತ್ತದೆ. 11 ನೇ ತರಗತಿ ವಿದ್ಯಾರ್ಥಿನಿಯರಿಗೆ ತಿಂಗಳಿಗೆ 500 ರೂ. ನೀಡಲಾಗುತ್ತದೆ. ಅಂದರೆ, ಒಂದು ವರ್ಷಕ್ಕೆ 6 ಸಾವಿರ ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುತ್ತದೆ.
12ನೇ ತರಗತಿಯ ವಿದ್ಯಾರ್ಥಿನಿಯರಿಗೆ ಕೂಡ ಮಾಸಿಕ 500 (ವರ್ಷಕ್ಕೆ 6 ಸಾವಿರ) ನೀಡಲಾಗುತ್ತದೆ.
ಅರ್ಹತೆ : ಇದೇ ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದರೆ ಮಾತ್ರವೇ ಸೌಲಭ್ಯ ಪಡೆಯಬಹುದು. ಅರ್ಜಿದಾರರು 10 ನೇ ತರಗತಿಯಲ್ಲಿ ಶೇ.60ರಷ್ಟು ಅಥವಾ ಹೆಚ್ಚಿನ ಅಂಕ ಗಳಿಸಬೇಕು.
11 ಮತ್ತು 12 ನೇ ತರಗತಿಯಲ್ಲಿನ ಬೋಧನಾ ಶುಲ್ಕವು ತಿಂಗಳಿಗೆ 1500 INR ಗಿಂತ ಹೆಚ್ಚಿರಬಾರದು ಮತ್ತು ಶಾಲೆಯು CBSE ಯೊಂದಿಗೆ ಸಂಯೋಜಿತವಾಗಿರಬೇಕು. ವಿದ್ಯಾರ್ಥಿವೇತನವನ್ನು ಭಾರತೀಯ ನಾಗರಿಕರಿಗೆ ಮಾತ್ರ ನೀಡಲಾಗುವುದು.
ಈ ವಿದ್ಯಾರ್ಥಿವೇತನಕ್ಕಾಗಿ, ಅರ್ಜಿದಾರರು 11 ನೇ ಮತ್ತು 12 ನೇ ತರಗತಿಯ ಮುಂದಿನ ಅಧ್ಯಯನವನ್ನು ಮುಂದುವರಿಸಬೇಕು. ಮಂಡಳಿಯು ಎನ್ಆರ್ಐ ಅಭ್ಯರ್ಥಿಗಳಿಗೂ ಸೌಲಭ್ಯ ನೀಡುತ್ತದೆ.
ನವೀಕರಣ ಪ್ರಕ್ರಿಯೆ : ಅರ್ಜಿದಾರರು ಕಳೆದ ವರ್ಷದ ಮೆರಿಟ್ ಪಟ್ಟಿಯಲ್ಲಿರಬೇಕು. ಮಾರ್ಗಸೂಚಿಗಳ ಪ್ರಕಾರ, ಅರ್ಜಿದಾರರು 11 ನೇ ತರಗತಿಯಲ್ಲಿ ಕನಿಷ್ಠ ಶೇ.50ರಷ್ಟು ಅಂಕ ಪಡೆದಿರಬೇಕು. 10 ನೇ ತರಗತಿಯ ಅಭ್ಯರ್ಥಿಗಳ ಶಾಲಾ ಶುಲ್ಕವು 1500 ರೂಪಾಯಿಗಿಂತ ಹೆಚ್ಚಿರಬಾರದು.
ಮುಂದಿನ ಎರಡು ವರ್ಷಗಳಲ್ಲಿ ಶೇ.10ಕ್ಕಿಂತ ಹೆಚ್ಚು ಬೋಧನಾ ಶುಲ್ಕ ಹೆಚ್ಚಿಸದಿದ್ದಾಗ ನವೀಕರಣವನ್ನು ಪ್ರಕ್ರಿಯೆಗೊಳಿಸಬಹುದು.
ಮೊದಲಿಗೆ CBSE ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.ನಂತರ CBSE ಸ್ಕಾಲರ್ಶಿಪ್ ಪುಟಕ್ಕೆ ಭೇಟಿ ನೀಡಿ, ನೀವು ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದರೆ ನಂತರ SGC-X – ಫ್ರೆಷ್ ಅಪ್ಲಿಕೇಶನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ ಹೊಸ ಪುಟದಲ್ಲಿ ಜನ್ಮ ದಿನಾಂಕ ಮತ್ತು ರೋಲ್ ನಂಬರ್ ಮೊದಲಾದ ಎಲ್ಲ ಅಗತ್ಯ ವಿವರಗಳನ್ನು ಭರ್ತಿ ಮಾಡಿ, ನಂತರ ಪ್ರೊಸೀಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, 3 ಮತ್ತು ನೀವು ಸ್ಕಾಲರ್ಶಿಪ್ನ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಲು ಬಯಸಿದರೆ, ಅಭ್ಯರ್ಥಿಯು ಎಸ್ ಜಿ ಸಿ-ಎಕ್ಸ್ ರಿನೀವಲ್ ಮೇಲೆ ಕ್ಲಿಕ್ ಮಾಡಿ. ನಂತರ ರೋಲ್ ನಂಬರ್, ಜನ್ಮ ದಿನಾಂಕ ಮೊದಲಾದ ಅಗತ್ಯ ವಿವರಗಳನ್ನು ಭರ್ತಿ ಮಾಡಿ. ನಂತರ ಪ್ರೊಸೀಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅರ್ಜಿದಾರರು ತಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಲು ಡಾಕ್ಯುಮೆಂಟ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನೋಂದಣಿ ಸಂಖ್ಯೆ ಮತ್ತು ರೋಲ್ ನಂಬರ್ ನಮೂದಿಸಿ. ಎಲ್ಲಾ ದಾಖಲೆಗಳು ಮತ್ತು ವಿವರಗಳನ್ನು ನಮೂದಿಸಿದ ನಂತರ, ದೃಢೀಕರಣ ಟ್ಯಾಪ್ ಅನ್ನು ಕ್ಲಿಕ್ ಮಾಡಿ, ಇಲ್ಲಿ ಫ್ರೆಷ್ ಅಭ್ಯರ್ಥಿಗಳು ದೃಢೀಕರಣ ಪುಟವನ್ನು CBSE ಮಂಡಳಿಗೆ ಕಳುಹಿಸಬೇಕಾಗಿಲ್ಲ.