ಮತ್ತೆ ಪ್ರತಿಭಟನೆಗೆ ಇಳಿದ ಆಶಾ ಕಾರ್ಯಕರ್ತೆಯರು | ಬಾಕಿ ಇರುವ ವೇತನ, ಗೌರವಧನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ನಾಳೆ ಧರಣಿ ನಡೆಸಲು ಸಜ್ಜು
ಪ್ರಾಣದ ಹಂಗು ತೊರೆದು ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರಿಯಾದ ವೇತನ , ನೀಡಬೇಕಾದ ಗೌರವಧನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನಾಳೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಕಳೆದ ವರ್ಷವಷ್ಟೇ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಇದೀಗ ಮತ್ತೆ ಹಲವು ವರ್ಷಗಳಿಂದ ಈಡೇರದ ಬೇಡಿಕೆಗಳನ್ನು ಈಡೇರಿಸುವಂತೆ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸಲು ಕಾರ್ಯಕರ್ತೆಯರು ಸಜ್ಜಾಗಿದ್ದಾರೆ.
ಸಾವಿರಾರು ಆಶಾಕಾರ್ಯಕರ್ತೆಯರಿಗೆ ನೀಡಬೇಕಾದ ಗೌರವಧನವನ್ನೂ ಸರ್ಕಾರ ಈವರೆಗೆ ನೀಡಲು ಮುಂದಾಗಿಲ್ಲ. ಹೀಗಾಗಿ ಬಾಕಿ ಇರುವ ವೇತನ, ಗೌರವಧನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನಾಳೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
“ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹಲವಾರು ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಹೆಚ್ಚು ಮಾಡಿಲ್ಲ, ಕೊರೋನಾ ಸಮಯದಲ್ಲಿ ಸೋಂಕು ಹರಡುವುದನ್ನ ತಡೆಯಲು ಕೊರೊನಾ ವಾರಿಯರ್ಸ್ ಆಗಿ ದಿನದ 24 ಗಂಟೆ ಕೆಲಸ ಮಾಡಿದ್ದೇವೆ. ಆದರೆ ಅದಕ್ಕೆ ಸರಿಯಾದ ಸಂಬಳವನ್ನು ರಾಜ್ಯ ಸರ್ಕಾರ ಕೊಟ್ಟಿಲ್ಲ” ಎಂದು ಕಾರ್ಯಕರ್ತೆಯರು ಪರವಾಗಿ ಎಐಯುಟಿಯುಸಿ ಆಗ್ರಹ ಮಾಡಿದೆ.
ಅಲ್ಲದೇ “ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ 5 ಸಾವಿರ ಹಾಗೂ ಕೇಂದ್ರ ಸರ್ಕಾರ 3 ಪ್ರೋತ್ಸಾಹ ಧನವನ್ನು ನಿಗಧಿ ಮಾಡಿದೆ. ಆದರೆ ಕೇಂದ್ರ ಸರ್ಕಾರದಿಂದ ನೀಡುವ ಹಣದಲ್ಲಿ ಕೇವಲ 650 ರೂಪಾಯಿ ಮಾತ್ರ ಸಿಗುತ್ತಿದೆ. ಇದು ಆಶಾ ಕಾರ್ಯಕರ್ತೆಯರಿಗೆ ಅವಮಾನ ಮಾಡಿದ್ದಂತೆ, ಹಾಗಾಗಿ ಪ್ರೋತ್ಸಾಹ ಧನ ಹಾಗೂ ಗೌರವ ಧನವಾಗಿ ಎರಡನ್ನು ಸೇರಿಸಿ ಮಾಸಿಕ ವೇತನ ನೀಡಬೇಕು. ಅಲ್ಲದೇ ಈಗಾಗಲೇ ಆರ್ಸಿಹೆಚ್ ಪೋರ್ಟಲ್ ಡೇಟಾ ಎಂಟ್ರಿಯಲ್ಲಿ ಸಮಸ್ಯೆಯಾಗುತ್ತಿದೆ. ಆ ಸಮಸ್ಯೆಯನ್ನು ಬಗೆಹರಿಸಿ, ಆಶಾ ಕಾರ್ಯಕರ್ತೆಯರಿಗೆ ಉಂಟಾಗಿರುವ ನಷ್ಟವನ್ನು ಸರ್ಕಾರವೇ ಕೊಡಬೇಕು” ಎಂದು ಸಂಸ್ಥೆ ಒತ್ತಾಯಿಸಿದೆ.
ಇನ್ನು ಪತ್ರಿಕೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಗಿರಿಜಮ್ಮ, “ಆಶಾ ಕಾರ್ಯಕರ್ತೆಯರು ಉತ್ತಮವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಪ್ರಾಣದ ಹಂಗು ತೊರೆದು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಹಗಲಿರುಳು ದುಡಿದರೂ ಅವರಿಗೆ ಸಿಗಬೇಕಾದ ಗೌರ ಸಿಗದಿರುವುದು ಶೋಚನೀಯ. ನಿತ್ಯ ಎರಡು ಗಂಟೆ ಮಾತ್ರ ಕೆಲಸ ಮಾಡುವಂತೆ ಆದೇಶದಲ್ಲಿದೆ. ಕೆಲಸದ ಹೊರೆ ಹೆಚ್ಚಾಗಿದ್ದು, ನಿತ್ಯ ಎಂಟು ಗಂಟೆ ಕೆಲಸ ಮಾಡುವುದು ಅನಿವಾರ್ಯ ಎನ್ನುವಂತಾಗಿದೆ. ಬಜೆಟ್ ನಲ್ಲಿ 1 ಸಾವಿರ ಗೌರವ ಧನ ಹೆಚ್ಚು ಮಾಡಲಾಗಿದ್ದರೂ, ಅದು ತೋರಿಕೆಗೆ ಮಾಡಿದಂತಿದೆ. ಬೆಲೆ ಏರಿಕೆ, ಆಶಾ ಕಾರ್ಯಕರ್ತೆಯರಿಗೆ ನೀಡಿದ ಜವಾಬ್ದಾರಿಗೆ ಹೋಲಿಸಿದರೆ ಸರ್ಕಾರ ಆಶಾ ಕಾರ್ಯಕರ್ತೆಯರ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಾಗಿ ಕಾಣುತ್ತಿದೆ” ಎಂದು ಆರೋಪಿಸಿದ್ದಾರೆ.
ಈ ಮೊದಲು ಕೊರೋನಾ ಮೊದಲ ಅಲೆ ರಾಜ್ಯದಲ್ಲಿ ವ್ಯಾಪಕವಾಗಿ ಹರಡಿದ್ದ ಸಂದರ್ಭದಲ್ಲಿ ಸರ್ಕಾರ ಆಶಾ ಕಾರ್ಯಕರ್ತೆಯರನ್ನೂ ಕೋವಿಡ್ ವಾರಿಯರ್ ಎಂದು ಘೋಷಿಸಿತ್ತು. ಕೊರೋನಾ ಕೆಲಸದ ವೇಳೆ ಮೃತಪಟ್ಟರೆ 50 ಲಕ್ಷ ಪರಿಹಾರ ಮತ್ತು ಕೂಡಲೇ ಎಲ್ಲರ ಬಾಕಿ ಹಣ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿತ್ತು. ಆದರೆ, ಕೊರೋನಾದಿಂದ ಈವರೆಗೆ 16 ಜನ ಆಶಾ ಕಾರ್ಯಕರ್ತೆಯರು ಮೃತಪಟ್ಟಿದ್ದು, ಒಬ್ಬರಿಗೆ ಮಾತ್ರ ಪರಿಹಾರ ನೀಡಿದೆ. ಸರ್ಕಾರದ ಈ ನಡೆಯನ್ನು ವಿರೋಧಿಸಿ ಕಳೆದ ವರ್ಷ ಪ್ರತಿಭಟನೆ ಮಾಡಿದ್ದರು. ಆದರೆ, ರಾಜ್ಯ ಸರ್ಕಾರ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ . ಈ ನಡುವೆ ಆಶಾ ಕಾರ್ಯಕರ್ತೆಯರು ಮತ್ತೊಮ್ಮೆ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.