ಮಂಗಳೂರು : ಹೆಂಡತಿಗೆ ದೊಣ್ಣೆಯಿಂದ ಹೊಡೆದು ಕೊಲೆ | ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಗಂಡನ ಕೊಲೆ ಕೃತ್ಯ !

ಉಳ್ಳಾಲ : ದೊಣ್ಣೆಯಿಂದ ಪತ್ನಿಯ ತಲೆಗೆ ಹೊಡೆದು ಕೊಲೆ ಮಾಡಿದ ಪತಿರಾಯನೋರ್ವ, ಇದೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದು, ಶವ ಮಹಜರು ಪರೀಕ್ಷೆಯ ವರದಿಯಲ್ಲಿ ಕೊಲೆ ಕೃತ್ಯ ಎಂಬುದಾಗಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಪತಿ ಜೈಲು ಪಾಲಾದ ಘಟನೆ ಕುಂಪಲದ ಚೇತನ ನಗರದಲ್ಲಿ ನಡೆದಿದೆ.

 

ಜೋಸೆಫ್ ಫ್ರಾನ್ಸಿಸ್ (54) ಎಂಬಾತನೇ ಪತ್ನಿಯ ಕೊಲೆ ಆರೋಪದಲ್ಲಿ ಬಂಧಿತ ವ್ಯಕ್ತಿ. ದಂಪತಿ ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲ, ಚೇತನ ನಗರ ಎಂಬಲ್ಲಿ ವಾಸವಾಗಿದ್ದರು. ಮೇ 11 ರ ಬುಧವಾರ ಸಂಜೆ ಕುಲ್ಲಕ ವಿಚಾರವೊಂದಕ್ಕೆ ಪತಿ, ಪತ್ನಿಯರ ನಡುವೆ ಜಗಳ ನಡೆದಿತ್ತು.

ಈ ಸಂದರ್ಭ ಜೋಸೆಫ್ ಫ್ರಾನ್ಸಿಸ್ ತನ್ನ ಪತ್ನಿ ಶೈಮಾಳಿಗೆ ದೊಣ್ಣೆಯಿಂದ ತಲೆಗೆ ಹೊಡೆದಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಶೈಮಾಲಿಗೆ ಜೋಸೆಫ್ ವಿಷ ಬೇರೆ ಕುಡಿಸಿದ್ದನಂತೆ. ನಂತರ ಶೈಮಾಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ರಾತ್ರಿ ಸಾವನ್ನಪ್ಪಿದ್ದಾರೆ. ಆದರೆ ತನ್ನ ಮಗಳ ಸಾವಿನ ಬಗ್ಗೆ ಅನುಮಾನಗೊಂಡ ಶೈಮಾ ಅವರ ತಂದೆ ಕೊಚ್ಚಿ ನಿವಾಸಿ ಜೋಸೆಫ್ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಜೋಸೆಫ್ ಫ್ರಾನ್ಸಿಸ್‌ನನ್ನು ಬಂಧಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಈ ವೇಳೆ ಆರೋಪಿ ಜೋಸೆಫ್ ಆಕೆ ವಿಷ ಕುಡಿದೇ ಈ ರೀತಿ ಆದದ್ದು ಎಂದು ಬಿಂಬಿಸಿದ್ದ. ಆದರೂ ಸಾವಿನ ಬಗ್ಗೆ ಪೊಲೀಸರಿಗೆ ಸಂಶಯ ಉಂಟಾಗಿತ್ತು.

ಶನಿವಾರ ಶವ ಮಹಜರು ಪರೀಕ್ಷೆಯ ವರದಿ ಬಂದಿದ್ದು, ಇದರಿಂದ ಕೊಲೆ ಕೃತ್ಯ ಬಹಿರಂಗಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಜೋಸೆಫ್ ಫ್ರಾನ್ಸಿಸ್‌ನನ್ನು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚುವರಿ ತನಿಖೆಗೆ ಉಳ್ಳಾಲ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಜೋಸೆಫ್, ಶೈಮಾ ದಂಪತಿಯ ಇಬ್ಬರು ಪುತ್ರರು ವ್ಯಾಸಂಗ ನಡೆಸುತ್ತಿದ್ದು ಕೊಲೆ ನಡೆದ ವೇಳೆ ಮನೆಯಲ್ಲೇ ಇದ್ದರಂತೆ. ತಂದೆಯನ್ನ ರಕ್ಷಿಸಲಿಕ್ಕಾಗಿ ಪೊಲೀಸರಲ್ಲಿ ಮಕ್ಕಳು ಸತ್ಯ ಮರೆಮಾಚಿದ್ದರೆಂದು ತಿಳಿದುಬಂದಿದೆ. ತಂದೆ, ತಾಯಿಯ ಜಗಳದಲ್ಲೀಗ ಇಬ್ಬರು ಗಂಡು ಮಕ್ಕಳು ಅನಾಥರಾಗಿದ್ದಾರೆ.

Leave A Reply

Your email address will not be published.