ಕೃಷಿ ಭೂಮಿ ಪಕ್ಕದಲ್ಲಿ ಮರಳುಗಾರಿಕೆ ನಿಲ್ಲಿಸಿ : ನಿರಂತರ ಮನವಿಗೆ ಬೇಕಿದೆ ಜಿಲ್ಲಾಧಿಕಾರಿಗಳ ಸ್ಪಂದನೆ.
ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಮಣಿಯೇರು ಎಂಬಲ್ಲಿ ನೇತ್ರಾವತಿ ನದಿ ಪಕ್ಕದಲ್ಲಿ ಮರಳುಗಾರಿಕೆ ನಡೆಸಿ ಕೃಷಿಕರ ಕೃಷಿ ಭೂಮಿ ನಾಶವಾಗುತ್ತಿದೆ ಎಂದು ಜಿಲ್ಲಾಧಿಕಾರಿಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ಜಂಟಿ ಸ್ಥಳ ಪರಿಶೀಲನೆಗೆ ಆದೇಶಿಸಿ, ವರದಿಯನ್ನು ತಾಲೂಕು ಮರಳು ಸಮಿತಿಗೆ ನೀಡುವಂತೆ ನೋಟೀಸು ನೀಡಿದ್ದರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ
ಮೇ ೧೦ರಂದು ಸ್ಥಳ ತನಿಖೆಗೆ ಗಣಿ ಇಲಾಖೆಯ ಮಹಿಳಾ ಅಧಿಕಾರಿ ಸ್ಥಳಕ್ಕೆ ಆಗಮಿಸಿದ್ದರು. ಸ್ಥಳೀಯ ಪಟ್ರಮೆ ಪಂಚಾಯತ್‌ನ ಪಿಡಿಓ ಕೂಡ ಸ್ಥಳದಲ್ಲಿ ಇದ್ದರು. ನೋಟೀಸ್‌ನಲ್ಲಿ ಸೂಚಿಸಿದ ಪ್ರಕಾರ ವಲಯ ಅರಣ್ಯಾಧಿಕಾರಿ, ತಹಶೀಲ್ದಾರ್, ಜಲ ಸಂಪನ್ಮೂಲ ಇಲಾಖೆ ಅಧಿಕಾರಿ, ಹಿರಿಯ ಭೂವಿಜ್ಞಾನಿ, ಅಲ್ಲದೆ ಭೂ ವಿಜ್ಞಾನ ಇಲಾಖೆಗೆ ಸಂಬಂಧಪಟ್ಟ ಇತರೆ ಇಬ್ಬರು ಅಧಿಕಾರಿಗಳು ಸ್ಥಳದಲ್ಲಿ ಇರಬೇಕಿತ್ತು. ಆದರೆ ಅವರ‍್ಯಾರು ಇರಲಿಲ್ಲ.
ದೂರುದಾರ ಕೃಷಿಕರ ಜಮೀನಿಗೂ ಬಂದು, ಅಲ್ಲೇ ಕೆಳಗಡೆಯ ಮರಳುಗಾರಿಕೆಯಿಂದಾಗಿ ಕೃಷಿ ಜಮೀನಿನ ಬದಿ ಅಲ್ಲಲ್ಲಿ ಕುಸಿದಿರುವುದನ್ನು ಮತ್ತು ನದಿಯ ಬದಿಯು ನೀರಿನ ಕೊರೆತದಿಂದಾಗಿ ಕೃಷಿ ಜಮೀನು ಒತ್ತುತ್ತಿರುವುದನ್ನು ಸ್ವತಃ ನೋಡಿರುತ್ತಾರೆ. ಪರಿಶೀಲನೆಯ ವರದಿಯನ್ನು ತಾಲೂಕು ಮರಳು ಸಮಿತಿಗೆ ಒಪ್ಪಿಸುವುದಾಗಿ ತಿಳಿಸಿರುತ್ತಾರೆ. ಸದ್ರಿ ಸ್ಥಳದಲ್ಲಿ ಮರಳುಗಾರಿಕೆಗೆ ಅನುಮತಿ ಕೊಡಬಾರದಿತ್ತು, ನಮಗೆ ಮಾಹಿತಿಯೂ ಕೊಡದೆ ಅನುಮತಿಸಲಾಗಿತ್ತು, ಸದ್ರಿ ಪರವಾನಿಗೆಯನ್ನು ರದ್ದುಗೊಳಿಸಲೇಬೇಕು ಎಂಬುದು ಅಲ್ಲಿ ಸೇರಿದ್ದ ಸಂತ್ರಸ್ಥ ಕೃಷಿಕರ ಮತ್ತು ಗ್ರಾಮಸ್ಥರ ಬೇಡಿಕೆಯಾಗಿತ್ತು. ” ನನಗೆ ಅನುಮತಿ ಸಿಕ್ಕಿದ ಪ್ರದೇಶ ಇದು, ಇಲ್ಲಿ ಮರಳು ತೆಗೆಯಬಾರದೆಂದರೆ ಹೇಗೇ ? ನಾನು ಸರಕಾರಕ್ಕೆ ಹಣ ಕಟ್ಟಿ ನಷ್ಟ ಅನುಭವಿಸುವುದಿಲ್ಲವೇ ? ” ಎಂಬುದು ಮರಳು ಗುತ್ತಿಗೆದಾರರ ಪ್ರಶ್ನೆಯಾಗಿತ್ತು. ಆದರೆ, ೨೦೧೨ – ೧೮ ರ ವರೆಗೆ ಅನುಮತಿ ರಹಿತವಾಗಿ ತೆಗೆಯುತ್ತಿದ್ದಾಗಲೇ ಆಕ್ಷೇಪವಿದ್ದ ಸ್ಥಳದಲ್ಲಿ ಪರವಾನಿಗೆ ತೊಟ್ಟುಕೊಂಡು ಬರುವ ಕೆಲಸ ಮಾಡಬಾರದಿತ್ತು ಎಂಬುದು ಸ್ಥಳೀಯರ ಅಭಿಪ್ರಾಯವಾಗಿತ್ತು.” ಕಳೆದ ೧-೧.೫ ತಿಂಗಳ ಹಿಂದಿನವರೆಗೂ, ಸದ್ರಿ ಅನುಮತಿ ಪ್ರದೇಶದ ಮೇಲಿನ ಪ್ರದೇಶದಲ್ಲಿ ಮರಳುಗಾರಿಕೆ ಮಾಡುತ್ತಿದ್ದರು. ಇಲ್ಲಿ ಅನುಮತಿ ಪ್ರದೇಶ ೪.೯೪ ಎಕರೆ ಆಗಿದ್ದರೆ, ಅನುಮತಿ ಇಲ್ಲದ ಪ್ರದೇಶದಲ್ಲಿ ಸುಮಾರು ೧.೫ ಕಿ.ಮೀ ಉದ್ದದ ಸ್ಥಳದಲ್ಲಿ ೭ – ೮ ಎಕರೆ ಪ್ರದೇಶದಲ್ಲಿ ಅವರು ಈಗಾಗಲೇ ಮರಳು ತೆಗೆದಿರುವುದರಿಂದ ಅವರಿಗೆ ನಷ್ಟವಾಗಲು ಹೇಗೆ ಸಾಧ್ಯ ?” ಎಂಬುದು ಸ್ಥಳೀಯರ ಪ್ರಶ್ನೆಯಾಗಿತ್ತು. ” ಹೇಗೂ ಅನುಮತಿ ಪ್ರದೇಶದಿಂದ ಮೇಲ್ಬಾಗದ ಪ್ರದೇಶದಲ್ಲಿ ಅವರು ಮರಳು ತೆಗೆಯುತ್ತಿರುವಾಗ ಆ ಪ್ರದೇಶಕ್ಕೇ ಅವರಿಗೆ ಪರವಾನಿಗೆ ಕೊಟ್ಟರೆ ಅವರಿಗೂ ನ್ಯಾಯ ಸಿಗುತ್ತದೆ, ಕೃಷಿಕರಿಗೂ ನ್ಯಾಯ ಸಿಗುತ್ತದೆಯಲ್ಲವೇ” ಎಂಬ ಪ್ರಶ್ನೆಯೂ ಗ್ರಾಮಸ್ಥರದ್ದಾಗಿತ್ತು. ಎಲ್ಲರ ಅಹವಾಲುಗಳನ್ನು ಕೇಳಿಸಿಕೊಂಡು, ಆ ಗಣಿ ಇಲಾಖಾಧಿಕಾರಿಯವರು ಮಹಜರು ಬರೆದು, ಸ್ಥಳೀಯರ ಸಹಿ ಪಡೆದಿರುತ್ತಾರೆ. ಅದನ್ನು ತಾಲೂಕು ಮರಳು ಸಮಿತಿಗೆ ಒಪ್ಪಿಸುವುದಾಗಿಯೂ, ಅವರ ತೀರ್ಮಾನ ಪ್ರಕಾರ ಮುಂದಿನ ಕ್ರಮ ಇರುತ್ತದೆ ಎಂಬುದಾಗಿ ತಿಳಿಸಿ ಹೋಗಿರುತ್ತಾರೆ. ” ಈ ಹಿಂದೆಯೂ ಬಂದಿದ್ದೀರಿ, ಆ ಮೇಲಿನ ಕ್ರಮ ಏನಾಗಿದೆ ಎಂಬ ಬಗ್ಗೆ ಮಾಹಿತಿಯೇ ನಮಗೆ ಸಿಗುತ್ತಿಲ್ಲವಲ್ಲಾ ” ಎಂದು ಕೃಷಿಕರು ಕೇಳಿದಾಗ – ” ಮಹಜರು ಬರೆದು ಮರಳು ಸಮಿತಿಗೆ ವರದಿ ಒಪ್ಪಿಸುವುದಷ್ಟೇ ನನ್ನ ಕೆಲಸ, ಅವರು ಮೀಟಿಂಗ್ ಮಾಡದೆ, ತೀರ್ಮಾನ ಕೈಗೊಳ್ಳದೆ ಇದ್ದರೆ ನಾನು ಹೊಣೆಯಲ್ಲ” ಹೆಚ್ಚಿನ ಮಾಹಿತಿ ಬೇಕಾದಲ್ಲಿ ಆರ್‌ಟಿಐ ನಿಂದ ಪಡೆದುಕೊಳ್ಳಿ ಎಂದು ತಿಳಿಸಿದರು.
ತಾಲೂಕು ಮರಳು ಸಮಿತಿ ಬಗ್ಗೆ ಮಾಹಿತಿ ಇಲ್ಲಿನವರಿಗೆ ಇಲ್ಲ. ಪ್ರತೀ ಸಲ ಅಧಿಕಾರಿಗಳು ಬಂದಾಗಲೂ ಅವರದ್ದೇ ಕಥೆಗಳನ್ನು ಹೇಳಿ ನಮ್ಮ ಬಾಯಿ ಮುಚ್ಚಿಸುತ್ತಾರೆ. ಇದರಿಂದಾಗಿ, ಇಂದಿನ ವರದಿಯೂ ಅದೇ ರೀತಿ ಆದೀತೇ ಎಂಬ ಬಗ್ಗೆಯೂ ಕೃಷಿಕರು ಗೊಂದಲದಲ್ಲಿದ್ದಾರೆ.