ಬಾಬರಿ ಮಸೀದಿಯ ಹಾಗೆ ಇನ್ನೊಂದು ಮಸೀದಿಯನ್ನು ಕಳೆದುಕೊಳ್ಳಲು ನಾವು ತಯಾರಿಲ್ಲ !! – ಅಸಾದುದ್ದೀನ್ ಓವೈಸಿ
ವಾರಾಣಸಿಯ ಜ್ಞಾನವಾಪಿ ಮಸೀದಿಯ ಕುರಿತು ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಆಲ್ ಇಂಡಿಯಾ ಮಜ್ಲಿಸ್- ಇ- ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಬಾಬರಿ ಮಸೀದಿಯ ಹಾಗೆ ಇನ್ನೊಂದು ಮಸೀದಿಯನ್ನು ಕಳೆದುಕೊಳ್ಳಲು ನಾವು ತಯಾರಾಗಿಲ್ಲ ಎಂದು ಹೇಳಿದ್ದಾರೆ.
ಕಾಶಿ ವಿಶ್ವನಾಥ ದೇವಸ್ಥಾನ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಒಳಗೆ ವೀಡಿಯೋ ಪರಿಶೀಲನೆ ನಡೆಸುವ ಕಾರ್ಯ ಮುಂದುವರಿಸಬೇಕು ಮತ್ತು ಮೇ 17ರ ವೇಳೆಗೆ ವರದಿ ಸಲ್ಲಿಸಬೇಕು ಎಂದು ಅರ್ಜಿ ವಿಚಾರಣೆ ಬಳಿಕ ವಾರಾಣಸಿ ನ್ಯಾಯಾಲಯ ಆದೇಶ ನೀಡಿತ್ತು. ಸಮೀಕ್ಷೆ ಕಾರ್ಯದ ಉಸ್ತುವಾರಿಗೆ ಇನ್ನೂ ಇಬ್ಬರು ವಕೀಲರನ್ನು ಆಯುಕ್ತರನ್ನಾಗಿ ಕೋರ್ಟ್ ನೇಮಿಸಿತ್ತು. ಇದರ ನಂತರ ಓವೈಸಿ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1991ರ ಆರಾಧನಾ ಸ್ಥಳಗಳ ಕಾಯ್ದೆಯ ಸಂಪೂರ್ಣ ಉಲ್ಲಂಘನೆಯಾಗಿದ್ದು, ಕೋರ್ಟ್‌ನ ಈ ನಿರ್ಧಾರವು ಬಾಬ್ರಿ ಮಸೀದಿ ವಿವಾದ ಕುರಿತಾದ ಸುಪ್ರೀಂಕೋರ್ಟ್ ಮಹತ್ವದ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಲ್ಲದೆ, ಬಾಬ್ರಿ ಮಸೀದಿ ಬಳಿಕ ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ತಾವು ಬಯಸಿಲ್ಲ ಎಂದು ತಿಳಿಸಿದ್ದಾರೆ.
ಇದು ಸಂಪೂರ್ಣ ಉಲ್ಲಂಘನೆಯಾಗಿದೆ ಮತ್ತು ಇದರ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಮಸೀದಿ ಸಮಿತಿಗಳು ಸುಪ್ರೀಂಕೋರ್ಟ್‌ಗೆ ಹೋಗಲಿವೆ ಎಂದು ನಾನು ಆಶಿಸುತ್ತೇನೆ. ನಾನು ಈಗಾಗಲೇ ಒಂದು ಬಾಬ್ರಿ ಮಸೀದಿಯನ್ನು ಕಳೆದುಕೊಂಡಿದ್ದೇನೆ. ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಬದಲಿಸಲು ಪ್ರಯತ್ನಿಸುತ್ತಿರುವ ಜನರ ವಿರುದ್ಧ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಕೂಡಲೇ ಎಫ್‌ಐಆರ್ ದಾಖಲು ಮಾಡಬೇಕು ಎಂದು ಅವರು ಇದೇ ವೇಳೆ ಸಲಹೆ ಕೂಡ ನೀಡಿದ್ದಾರೆ.
ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಅಂಟಿಕೊಂಡಂತಿರುವ ಜ್ಞಾನವಾಪಿ ಮಸೀದಿಯ ಪಶ್ಚಿಮ ಭಾಗದ ಗೋಡೆಯ ಭಾಗದಲ್ಲಿ ಇರುವ ಹಿಂದೂ ದೇವತೆಗಳ ವಿಗ್ರಹಗಳನ್ನು ವರ್ಷಪೂರ್ತಿ ಆರಾಧನೆ ಮಾಡಲು ಅವಕಾಶ ನೀಡುವಂತೆ ಐವರು ಮಹಿಳೆಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಮಸೀದಿಯ ಒಳಗೆ ಮತ್ತು ಹೊರಗೆ ಸಮೀಕ್ಷೆ ನಡೆಸಲು ಕೋರ್ಟ್ ಸೂಚನೆ ನೀಡಿತ್ತು. ಕೋರ್ಟ್ ಕಮಿಷನರ್ ಅಜಯ್ ಮಿಶ್ರಾ ಅವರನ್ನು ತೆಗೆದುಹಾಕಲು ನಿರಾಕರಿಸಿದ್ದ ನ್ಯಾಯಾಲಯ, ಇನ್ನೂ ಇಬ್ಬರು ಕಮಿಷನರ್‌ಗಳನ್ನು ನೇಮಿಸಿತ್ತು. ಜೊತೆಗೆ ಜ್ಞಾನವಾಪಿ ಮಸೀದಿಯಲ್ಲಿನ ತಪಾಸಣೆ ಮುಂದುವರಿಸಬೇಕು ಹಾಗೂ ಮೇ 17ರ ಒಳಗೆ ವರದಿ ನೀಡಬೇಕು ಎಂದು ಸೂಚನೆ ನೀಡಿತ್ತು. ಈ ಕಾರ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆದೇಶ ನೀಡಿತ್ತು.