ಇನ್ನು ಮುಂದೆ ಮತದಾನಕ್ಕೆ “ಆಧಾರ” | ಶೀಘ್ರದಲ್ಲೇ ಮತದಾರರ ಪಟ್ಟಿಗೆ ಆಧಾರ್ ಲಿಂಕ್ ಜೋಡಣೆ ನಿಯಮ ಜಾರಿ

ನವದೆಹಲಿ: ಮತದಾರರ ಪಟ್ಟಿಯೊಂದಿಗೆ ಆಧಾರ್ ಲಿಂಕ್
ಮಾಡುವ ನಿಯಮಗಳನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊರಡಿಸಬಹುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ.

 

“ಮತದಾರರು ತಮ್ಮ ಆಧಾರ್ ವಿವರಗಳನ್ನು ಹಂಚಿಕೊಳ್ಳುವುದು ಕಡ್ಡಾಯವಲ್ಲ. ಇದು ಸ್ವಯಂಪ್ರೇರಿತವಾಗಿರುತ್ತದೆ. ಆದರೆ ಆಧಾರ್ ಲಿಂಕ್ ಮಾಡದವರು ಸಾಕಷ್ಟು ಕಾರಣಗಳನ್ನು ನೀಡಬೇಕಾಗುತ್ತದೆ”. ಈ ಸಂಬಂಧ ಈಗಾಗಲೇ ಕರಡು ಪ್ರಸ್ತಾಪಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು , ಶೀಘ್ರವೇ ನಿಯಮಗಳ ಅಧಿಸೂಚನೆಯನ್ನು ಸರ್ಕಾರ ಹೊರಡಿಸಲಿದೆ. ಜೊತೆಗೆ ಕೆಲವು ಬದಲಾವಣೆಗಳಿಗಾಗಿ ಅರ್ಜಿಗಳನ್ನು ರವಾನಿಸಿದ್ದು, ಕಾನೂನು ಸಚಿವಾಲಯ ಅವುಗಳ ಪರಿಶೀಲನೆ ನಡೆಸುತ್ತಿದೆ ಎಂದು ಸುಶೀಲ್ ಚಂದ್ರ ಹೇಳಿದ್ದಾರೆ.

ಸುಶೀಲ್ ಚಂದ್ರ ಅವರು ನಿವೃತ್ತಿಯಾಗುವ ಮೊದಲು ಮಾತನಾಡಿದ್ದು, ತಮ್ಮ ಅಧಿಕಾರಾವಧಿಯಲ್ಲಿ ನಡೆದ ಎರಡು ಪ್ರಮುಖ ಚುನಾವಣಾ ಸುಧಾರಣೆಗಳನ್ನು ಹೇಳಿದ್ದಾರೆ. ಅವು ಯಾವುದೆಂದರೆ, 18 ವರ್ಷ ತುಂಬಿದವರನ್ನು ಮತದಾರರಾಗಿ ನೋಂದಾಯಿಸಲು ಒಂದು ವರ್ಷದಲ್ಲಿ ನಾಲ್ಕು ಬಾರಿ ಅವಕಾಶ ನೀಡುವುದು ಮತ್ತು ಮತದಾರರ ಪಟ್ಟಿಯೊಂದಿಗೆ ಆಧಾರ್ ಲಿಂಕ್ ಮಾಡುವುದು ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸುಶೀಲ್ ಚಂದ್ರ ಅವರು ತಿಳಿಸಿದ್ದಾರೆ.

“ಮೊದಲು, ಪ್ರತಿ ವರ್ಷ ಜನವರಿ 1 ರಂದು ಮಾತ್ರ ನೋಂದಾಯಿಸಿಕೊಳ್ಳಲು ಅವಕಾಶ ಇತ್ತು. ಇದನ್ನು ಬದಲಾಯಿಸುವ ಅಗತ್ಯ ಇತ್ತು ಮತ್ತು ಜನ 18 ವರ್ಷ ತುಂಬಿದ ಕೂಡಲೇ ನೋಂದಾಯಿಸಿಕೊಳ್ಳಬೇಕು ಎಂದು ನಾವು ಸರ್ಕಾರಕ್ಕೆ ಮನವರಿಕೆ ಮಾಡಿದ್ದೇವೆ. ಈಗ ಈ ಸುಧಾರಣೆಯೊಂದಿಗೆ, ನಾಲ್ಕು ದಿನಾಂಕಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಸುಧಾರಣೆಯು ಕಳೆದ 20 ವರ್ಷಗಳಿಂದ ಬಾಕಿ ಉಳಿದಿತ್ತು ಎಂದು ಸುಶೀಲ್ ಚಂದ್ರ ಅವರು ಹೇಳಿದ್ದಾರೆ.

Leave A Reply

Your email address will not be published.