ದೆಹಲಿಯಲ್ಲಿ ಭಾರೀ ಅಗ್ನಿ ದುರಂತ | ಸಜೀವ ದಹನಗೊಂಡ 27 ಜನ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಸಮೀಪವಿರುವ ಕಟ್ಟಡದಲ್ಲಿ ಇಂದು ಭಾರೀ ಅಗ್ನಿ ಅವಘಡ ಸಂಭವಿಸಿದೆ.
ಮೆಟ್ರೊದ ಪಿಲ್ಲರ್ ಒಂದರ ಬಳಿಯ ಕಟ್ಟಡದಲ್ಲಿ ಸಂಜೆ 4.40ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಕೂಡಲೇ 30ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳಲ್ಲಿ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ, ಕಟ್ಟಡದಲ್ಲಿ ಸಿಲುಕಿದ್ದ 50ಕ್ಕೂ ಹೆಚ್ಚು ಜನರನ್ನು ರಕ್ಷಿಸಿದರು ಎಂದು ತಿಳಿದುಬಂದಿದೆ.
ಕಟ್ಟಡದ 2ನೇ ಅಂತಸ್ತಿನ ಕೊಠಡಿಯಲ್ಲಿ ಅತಿ ಹೆಚ್ಚು ಸಾವು-ನೋವು ಸಂಭವಿಸಿದೆ. ಈ ಕೊಠಡಿಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಕಟ್ಟಡದ ಮಾಲೀಕನನ್ನು ಬಂಧಿಸಿ, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
‘ಬೆಂಕಿ ಅವಘಡ ನಡೆದ ಕಟ್ಟಡದ 2ನೇ ಅಂತಸ್ತಿನಲ್ಲಿ ಸುಮಾರು 150 ಮಂದಿಯಿದ್ದರು. ಇದರಲ್ಲಿ 70-90 ಮಂದಿಯನ್ನು ರಕ್ಷಿಸಲಾಯಿತು. ಕೆಲವರು ಕಟ್ಟಡದ ಮೇಲಿನಿಂದ ಜಿಗಿದರು. ಇನ್ನು ಕೆಲವರು ಹಗ್ಗದ ನೆರವಿನಿಂದ ಇಳಿದರು’ ಎಂದು ಪ್ರಾಣಾಪಾಯದಿಂದ ಪಾರಾದ ವ್ಯಕ್ತಿಯೊಬ್ಬರು ಹೇಳಿದರು.
₹2 ಲಕ್ಷ ಪರಿಹಾರ: ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ಪರಿಹಾರ ನಿಧಿಯಿಂದ ₹2 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ ₹50,000 ಪರಿಹಾರವನ್ನುಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.
ಸಂಜೆ 4:45ರ ಸುಮಾರಿಗೆ ಮಾಹಿತಿ ಲಭಿಸಿದ್ದು, ತಕ್ಷಣವೇ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ಕಂಪನಿಯ ಮಾಲೀಕರಾದ ಹರೀಶ್ ಗೋಯೆಲ್ ಮತ್ತು ವರುಣ್ ಗೋಯೆಲ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಟ್ಟಡದ ಮಾಲೀಕರನ್ನು ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದ ಮನೀಶ್ ಲಾಕ್ರಾ ಎಂದು ಗುರುತಿಸಲಾಗಿದ್ದು ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.