100 ರೂ. ಲಿಪ್‍ಸ್ಟಿಕ್ ಗೆ ಆಕೆ ಕಳೆದುಕೊಂಡದ್ದು ಬರೋಬ್ಬರಿ 3 ಲಕ್ಷ ರೂ.| ಆನ್‍ಲೈನ್ ವ್ಯವಹಾರಕ್ಕೂ ಮುನ್ನ ಇರಲಿ ಎಚ್ಚರ !!

ಜನಸಾಮಾನ್ಯರಿಗೆ ಆನ್‍ಲೈನ್ ಶಾಪಿಂಗ್ ಮಾಡುವುದು ಇದೀಗ ಮಾಮೂಲಿಯಾಗಿ ಹೋಗಿದೆ. ಈ ಆನ್‍ಲೈನ್ ಶಾಪಿಂಗ್ ನಿಂದ ಎಷ್ಟು ಅನುಕೂಲ ಇದೆಯೋ ಅಷ್ಟೇ ಅನಾನುಕೂಲ ಕೂಡ ಇದೆ ಎಂದರೆ ತಪ್ಪಾಗಲಾರದು. ಅದಲ್ಲದೆ ಆನ್‍ಲೈನ್ ಶಾಪಿಂಗ್ ಹೆಸರಲ್ಲಿ ಜನ ಹೇಗೆಲ್ಲಾ ಮೋಸ ಮಾಡ್ತಾರೆ ಅನ್ನೋದಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಅಂತೆಯೇ ಇಲ್ಲಿ ನೂರು ರೂಪಾಯಿ ಲಿಪ್‍ಸ್ಟಿಕ್ ಆಸೆಗೆ ಬಿದ್ದ ಯುವತಿಯೊಬ್ಬಳು ಬರೋಬ್ಬರಿ ಮೂರೂವರೆ ಲಕ್ಷ ಕಳೆದುಕೊಂಡಿದ್ದಾರೆ.

 

ಹೌದು. ಆಶ್ಚರ್ಯವಾದರೂ ಇದು ನಿಜ. ಇತ್ತೀಚೆಗೆ ಸೈಬರ್ ವಂಚಕರ ಹಾವಳಿ ಹೆಚ್ಚಾಗ್ತಿದೆ. ಅದರಲ್ಲೂ ಅಮಾಯಕ ಜನ ಸಿಕ್ಕರಂತೂ, ಅವರಿಗೆ ಮೋಸ ಮಾಡೋದಿಕ್ಕೆ ರೆಡಿಯಾಗಿ ಇರ್ತಾರೆ. ಬೆಂಗಳೂರಿನ ಹೆಬ್ಬಾಳ ಬಳಿಯ ನಾಗೇನಹಳ್ಳಿ ನಿವಾಸಿಯಾಗಿರೋ ಯುವತಿಯೊಬ್ಬರಿಗೆ ಆನ್‍ಲೈನ್ ಡೆಲಿವರಿ ಕಂಪನಿಯಿಂದ ಕಾಲ್ ಮಾಡ್ತಿದ್ದೀವಿ ಮೇಡಂ ಅಂತಾ ಅಪರಿಚಿತ ವ್ಯಕ್ತಿಯೊಬ್ಬ ಕಾಲ್ ಮಾಡಿದ್ದ. ಹಾಗೇ ಮಾತು ಮುಂದುವರಿಸಿ, ನಮ್ಮಲ್ಲಿ ನೂರು ರೂಪಾಯಿ ಲಿಪ್‍ಸ್ಟಿಕ್ ಬುಕ್ ಮಾಡಿದ್ರೆ, ಲಕ್ಷಾಂತರ ರೂಪಾಯಿ ಬಹುಮಾನ ಗೆಲ್ಲಬಹುದು ಅಂತಾ ಯುವತಿಗೆ ತಲೆ ಸವರಿದ್ದ. ಆತನ ಮಾತನ್ನು ನಂಬಿದ ಯುವತಿ ನೂರು ರೂಪಾಯಿ ತಾನೇ ಓಕೆ ಅಂತಾ ಹೇಳಿದ್ದರು.

ನೂರು ರೂಪಾಯಿ ಬೆಲೆಯ ಲಿಪ್‍ಸ್ಟಿಕ್ ಬುಕ್ ಮಾಡಿದ ಯುವತಿಗೆ ಕೆಲ ನಿಮಿಷದಲ್ಲೇ ಆ ಕಡೆಯಿಂದ ಅಪರಿಚಿತ ಕಾಲ್ ಮಾಡಿದ್ದ. ಮೇಡಂ ನಿಮಗೆ ಒಂದು ಲ್ಯಾಪ್ ಟಾಪ್ ಮತ್ತು ಐಫೋನ್ ಬಂಪರ್ ಬಹುಮಾನ ಬಂದಿದೆ ಅಂದಿದ್ದ. ಈ ಮಾತು ಕೇಳಿದ ಯುವತಿ ಫುಲ್ ಖುಷಿ ಆಗಿ ಥ್ಯಾಂಕ್ ಯೂ ಸರ್ ಅಂದಿದ್ಲು. ಆಗ ಆ ಅಪರಿಚಿತ ವ್ಯಕ್ತಿ ನೀವೇ ಅಂತಾ ಕನ್ಫರ್ಮ್ ಮಾಡೋಕೆ ನಿಮಗೆ ಒಂದು ಲಿಂಕ್ ಕಳಿಸಿದ್ದೀನಿ ಅದನ್ನು ಓಕೆ ಮಾಡಿ ಅಂದಿದ್ದ. ಅಷ್ಟೇ ತಾನೇ ಅಂತಾ ಯುವತಿ ಆ ಲಿಂಕ್ ಓಕೆ ಮಾಡಿದ್ಲು. ಅಷ್ಟೇ ಕ್ಷಣಮಾತ್ರದಲ್ಲೇ ಆ ಯುವತಿ ಅಕೌಂಟ್ ನಲ್ಲಿದ್ದ ಮೂರು ಲಕ್ಷದ ಮೂವತ್ತೆಂಟು ಸಾವಿರ ಡೆಬಿಟ್ ಆಗಿದೆ ಅಂತಾ ಬ್ಯಾಂಕ್ ಕಡೆಯಿಂದ ಮಸೇಜ್ ಬಂದಿತ್ತು. ಯುವತಿ ಆ ಮಸೇಜ್ ನೋಡಿ ದಂಗಾಗಿ ಹೋದಳು. ಸದ್ಯ ಮೂರು ಲಕ್ಷ ಪಂಗನಾಮ ಹಾಕಿಕೊಂಡ ಯುವತಿ, ಈ ಸಂಬಂಧ ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇಂತಹ ಸಾವಿರಾರು ಕೇಸುಗಳು ನಡೆದರೂ ಜನರಿಗೆ ಇನ್ನೂ ಬುದ್ಧಿ ಬಂದಿಲ್ಲ. ಸಣ್ಣಪುಟ್ಟ ಬಹುಮಾನದ ಆಸೆಗೆ ಬಲಿಯಾಗಿ ತಮ್ಮಲ್ಲಿರುವ ಎಲ್ಲಾ ಹಣವನ್ನು ಕಳೆದುಕೊಳ್ಳುತ್ತಾರೆ. ಅದಕ್ಕೆ ಹೇಳೋದು, ಆನ್ ಲೈನ್ ನಲ್ಲಿ ಏನೇ ವ್ಯವಹಾರ ಮಾಡಬೇಕಾದರೂ ಹತ್ತು ಸಾರಿ ಯೋಚನೆ ಮಾಡಿ. ಯಾಕೆಂದರೆ ಸೈಬರ್ ವಂಚನೆಗೆ ಒಳಗಾದವರ ದುಡ್ಡು ವಾಪಸ್ ಬರೋದು ಬಹುತೇಕ ಡೌಟು.

Leave A Reply

Your email address will not be published.