2 ವರ್ಷಗಳ ಬಳಿಕ ಬಾಗಿಲು ತೆರೆದ ಕೇದಾರನಾಥಕ್ಕೆ ಹರಿದುಬರುತ್ತಿದೆ ಭಕ್ತ ಸಾಗರ !! | ಜನ ಪ್ರವಾಹಕ್ಕೆ ಒಂದೇ ವಾರದಲ್ಲಿ 28 ಭಕ್ತರ ಸಾವು
ಹಿಮಾಲಯದ ಮಡಿಲಲ್ಲಿರುವ ಶಿವನ ಭಕ್ತಿಯ ಧಾಮವಾದ ಕೇದಾರನಾಥ, ಸುಂದರವಾದ ನೈಸರ್ಗಿಕ ದೃಶ್ಯಗಳು ಮತ್ತು ಪೌರಾಣಿಕ ಕಥೆಗಳನ್ನು ಹೊಂದಿದೆ. ಶಿವನ 12 ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಕೇದಾರನಾಥ ಧಾಮವು 11 ನೇ ಸ್ಥಾನವನ್ನು ಪಡೆದುಕೊಂಡಿದೆ. ಕೋವಿಡ್ ನಿರ್ಬಂಧಗಳ ಹಿನ್ನಲೆಯಲ್ಲಿ ಬರೊಬ್ಬರಿ 2 ವರ್ಷಗಳ ಬಳಿಕ ಮೇ 6 ರ ಶುಕ್ರವಾರದಂದು ಕೇದಾರನಾಥ ದೇವಾಲಯದ ಬಾಗಿಲನ್ನು ಭಕ್ತರಿಗಾಗಿ ತೆರವುಗೊಳಿಸಲಾಗಿದೆ. ಪವಿತ್ರ ಚಾರ್ ಧಾಮ್ ಕ್ಷೇತ್ರಗಳಿಗೆ ಭಕ್ತರ ಪ್ರವಾಹವೇ ಹರಿದು ಬರುತ್ತಿದ್ದು, ಈವರೆಗೂ 28 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಹೌದು. ಉತ್ತರಾಖಂಡದ ಚಾರ್ ಧಾಮ್ಗಳಲ್ಲಿ ಒಂದಾದ ಕೇದಾರನಾಥ ದೇವಾಲಯಕ್ಕೆ ಅಭೂತಪೂರ್ವ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಇಂಡೋ-ಟಿಬೆಟಿಯನ್ ಬಾರ್ಡರ್ ಫೋರ್ಸ್ (ITBP) ಅನ್ನು ಶುಕ್ರವಾರ ಜನಸಂದಣಿ ನಿರ್ವಹಣೆಗಾಗಿ ನಿಯೋಜಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಐಟಿಬಿಪಿ ವಕ್ತಾರ ವಿವೇಕ್ ಕುಮಾರ್ ಪಾಂಡೆ ಅವರು, ಜನಸಂದಣಿ ನಿರ್ವಹಣೆಗಾಗಿ ITBP ಅನ್ನು ಕೇದಾರನಾಥದಲ್ಲಿ ನಿಯೋಜಿಸಲು ನಿರ್ಧರಿಸಲಾಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಕೂಡ ದೇವಸ್ಥಾನಗಳಿಗೆ ಜನಸಂದಣಿಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನೆಲೆಯಲ್ಲಿ ಕೇದಾರನಾಥ ದೇಗುಲದಲ್ಲಿ ಭದ್ರತೆ ಹಾಗೂ ಸುಗಮ ದರ್ಶನಕ್ಕೆ ಪಡೆಗಳನ್ನು ನಿಯೋಜಿಸಲಾಗಿದೆ. ಐಟಿಬಿಪಿಯು ಕೇದಾರನಾಥ ದೇವಸ್ಥಾನ ಮತ್ತು ಕೇದಾರನಾಥ ಕಣಿವೆಗೆ ಭಾರೀ ಜನದಟ್ಟಣೆಯನ್ನು ನಿರ್ವಹಿಸುತ್ತಿದೆ ಎಂದು ಹೇಳಿದರು.
ಪ್ರತಿದಿನ 20,000 ಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ ಮತ್ತು ಯಾತ್ರಾರ್ಥಿಗಳ ವಿಪರೀತ ಸ್ಥಳಗಳಾದ ಸೋನ್ಪ್ರಯಾಗ, ಉಖಿಮಠ ಮತ್ತು ಕೇದಾರನಾಥ ಯಾತಾರ್ಥಿಗಳಿಂದ ತುಂಬಿ ತುಳುಕುತ್ತಿದೆ. ಈ ಸ್ಥಳಗಳಲ್ಲಿ ನಿಯೋಜಿಸಲಾದ ಐಟಿಬಿಪಿ ತಂಡಗಳು ಯಾತ್ರಿಗಳ ಚಲನವಲನದ ಮೇಲೆ ನಿಗಾ ಇಡುತ್ತಿವೆ ಎಂದು ಪಾಂಡೆ ಹೇಳಿದರು.
ಇನ್ನು ಚಾರ್ ಧಾಮ್ ಯಾತ್ರೆ ಆರಂಭವಾದಾಗಿನಿಂದ ಈವರೆಗೂ ಕೇದಾರನಾಥಕ್ಕೆ ತೆರಳುತ್ತಿದ್ದ 28 ಪ್ರವಾಸಿಗರು ವಿವಿಧ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಪ್ರತೀಕೂಲ ಹವಾಮಾನ, ಅನಾರೋಗ್ಯ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇದೇ ವಿಚಾರವಾಗಿ ಮಾತನಾಡಿದ ಪಾಂಡೆ, ದೇವಾಲಯದ ಪೋರ್ಟಲ್ಗಳನ್ನು ತೆರೆದು ಒಂದು ವಾರವಾಗಿದೆ. ಇದುವರೆಗೆ 1,30,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ITBP ಪ್ರದೇಶದಲ್ಲಿರುವ ತನ್ನ ವಿಪತ್ತು ನಿರ್ವಹಣಾ ತಂಡಗಳಿಗೂ ಎಚ್ಚರಿಕೆ ನೀಡಲಾಗಿದೆ. ಆಕ್ಸಿಜನ್ ಸಿಲಿಂಡರ್ಗಳನ್ನು ಹೊಂದಿರುವ ವೈದ್ಯಕೀಯ ತಂಡಗಳನ್ನು ಸ್ಥಳಗಳಲ್ಲಿ ನಿಯೋಜಿಸಲಾಗಿದೆ ಮತ್ತು ರಾಜ್ಯ ಆಡಳಿತದ ಸಹಾಯದಿಂದ, ವೈದ್ಯಕೀಯ ತುರ್ತುಸ್ಥಿತಿಗಾಗಿ ಡ್ರಿಲ್ಗಳು ಮತ್ತು ಅವಶ್ಯಕತೆಗಳ ಮೇಲೆ ಸ್ಥಳಾಂತರಿಸುವಿಕೆಯನ್ನು ಕೈಗೊಳ್ಳಲಾಗುತ್ತಿದೆ.
ಬದರಿನಾಥ ದೇವಾಲಯದಲ್ಲೂ ಐಟಿಬಿಪಿ ತಂಡಗಳು ದೇವಸ್ಥಾನ ಮತ್ತು ನಾಗರಿಕ ಆಡಳಿತಕ್ಕೆ ಸುಗಮ ದರ್ಶನ ಮತ್ತು ಯಾತ್ರಾರ್ಥಿಗಳ ವಿಪರೀತ ನಿರ್ವಹಣೆಗೆ ಸಹಾಯ ಮಾಡುತ್ತಿವೆ. ಈ ವರ್ಷ ಚಾರ್ ಧಾಮ್ ಯಾತ್ರೆಯು ಕೋವಿಡ್ ನಿರ್ಬಂಧಗಳನ್ನು ತೆರವು ಮಾಡಿದ ಎರಡು ವರ್ಷಗಳ ನಂತರ ತೆರೆಯಲಾಗಿರುವುದರಿಂದ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ವಿಪರೀತ ಏರಿಕೆಯಾಗಿದೆ ಎಂದು ಹೇಳಿದರು.