ಸಿಎಂ ಭೇಟಿ ಬಳಿಕ ಊಟದ ತಟ್ಟೆಗಾಗಿ ಕಿತ್ತಾಡಿಕೊಂಡ ಶಿಕ್ಷಕರು !!-ವೀಡಿಯೋ ವೈರಲ್
ಮನುಷ್ಯ ಜೀವನ ನಡೆಸಲು ಶಿಸ್ತು ತುಂಬಾ ಮುಖ್ಯ. ಆ ಶಿಸ್ತಿಗೆ ಇನ್ನೊಂದು ಹೆಸರೇ ಶಿಕ್ಷಕರು. ತಮ್ಮ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡು ಮಕ್ಕಳ ಜೀವನದಲ್ಲೂ ಅದನ್ನು ಬೇರೂರಿಸುವುದು ಶಿಕ್ಷಕರ ಆದ್ಯ ಕರ್ತವ್ಯ. ಆದರೆ ಶಿಕ್ಷಕರೇ ಶಿಸ್ತು ಮೀರಿ ಊಟದ ತಟ್ಟೆಗಾಗಿ ಕಿತ್ತಾಡಿಕೊಳ್ಳುತ್ತಿರುವ ಘಟನೆ ಪಂಜಾಬ್ನಲ್ಲಿ ನಡೆದಿದೆ.
ಆಮ್ ಆದ್ಮಿ ಪಕ್ಷದ(ಎಎಪಿ) ಪಂಜಾಬ್ ಸಿಎಂ ಭಗವಂತ್ ಮಾನ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಶಾಲೆಯ ಮುಖ್ಯಸ್ಥರು ಮತ್ತು ಶಿಕ್ಷಕರೊಂದಿಗೆ ಸಭೆ ಕರೆಯಲಾಗಿತ್ತು. ಈ ಸಭೆಯನ್ನು ಲೂಧಿಯಾನದ ಐಷಾರಾಮಿ ರೆಸಾರ್ಟ್ನಲ್ಲಿ ಮಾಡಲಾಗಿತ್ತು. ಸಭೆ ಮುಗಿದ ನಂತರ ಎಲ್ಲ ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಹಿನ್ನೆಲೆ ಶಿಕ್ಷಕರು ಸರದಿ ಸಾಲಿನಲ್ಲಿ ನಿಂತುಕೊಳ್ಳದೆ ಊಟಕ್ಕಾಗಿ ಕಿತ್ತಾಡಿದ್ದಾರೆ.
ಶಿಕ್ಷಣ ಇಲಾಖೆಯು ಶಿಕ್ಷಣದ ಗುಣಮಟ್ಟದ ಕುರಿತು ಚರ್ಚಿಸಲು ರಾಜ್ಯದಾದ್ಯಂತ 2,600 ಕ್ಕೂ ಹೆಚ್ಚು ಶಾಲಾ ಮುಖ್ಯಸ್ಥರು ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಗಳ ಸಭೆಯನ್ನು ಕರೆದಿದೆ. ಈ ಸಭೆಯಲ್ಲಿ ಶೈಕ್ಷಣಿಕ ಸುಧಾರಣೆಗಳ ಬಗ್ಗೆ ಸಲಹೆಗಳನ್ನು ಚರ್ಚೆ ನಡೆಸಲಾಯಿತು. ನಂತರ ಮಧ್ಯಾಹ್ನದ ಊಟಕ್ಕೆಂದು ಶಿಕ್ಷಕರು ಹೋದಾಗ ತಟ್ಟೆಗಾಗಿ ಗಲಾಟೆ ನಡೆದಿದ್ದು, ಈ ದೃಶ್ಯ ಸೆರೆಯಾಗಿದೆ.
ಈ ವೀಡಿಯೋವನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಪಂಜಾಬ್ನ ಲುಧಿಯಾನಾದಲ್ಲಿ ಸಿಎಂ ಭಗವಂತ್ ಮಾನ್ ಮತ್ತು ಶಿಕ್ಷಣ ಸಚಿವರನ್ನು ಭೇಟಿ ಮಾಡಿದ ನಂತರ ಪ್ರಾಂಶುಪಾಲರು ಮತ್ತು ಶಿಕ್ಷಕರ ಊಟದ ದೃಶ್ಯ. ಅವರು ಅನೇಕ ದಿನಗಳಿಂದ ಹಸಿವಿನಿಂದ ಬಳಲುತ್ತಿರುವಂತೆ ತೋರುತ್ತಿದೆ. ಅಥವಾ ಅವರಿಗೆ ಉಚಿತ ಊಟವನ್ನು ಕಳೆದುಕೊಳ್ಳಲು ಇಷ್ಟವಿಲ್ಲ ಎಂದು ಬರೆದು ಟ್ವೀಟ್ ಮಾಡಲಾಗಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದು, ತಮಾಷೆ ಜೊತೆಗೆ ಶಿಕ್ಷಣ ವ್ಯವಸ್ಥೆಯನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ.