ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ಕೊನೆಗೂ ಬಂಧನ | ಸ್ವಾಮೀಜಿಯ ವೇಷ ಧರಿಸಿದ್ದ ಕಿರಾತಕ
ಬೆಂಗಳೂರು: ಸುಂಕದಕಟ್ಟೆಯಲ್ಲಿ ಹಾಡಹಗಲೇ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ನಾಗೇಶ್ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸ್ವಾಮೀಜಿ ವೇಷಧಾರಿಯಾಗಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಶುಕ್ರವಾರ ಬಂಧಿಸಲಾಗಿದೆ.
ಪ್ರೀತಿಸಲು ಒಲ್ಲೆ ಎಂದ 24 ವರ್ಷದ ಯುವತಿ ಮೇಲೆ ಏ.28ರ ಗುರುವಾರ ಬೆಳಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯ ಮುತ್ತೂಟ್ ಫೈನಾನ್ಸ್ ಬಳಿ ಭಗ್ನಪ್ರೇಮಿ ನಾಗೇಶ್ ಆಯಸಿಡ್ ಹಾಕಿ ಪರಾರಿಯಾಗಿದ್ದ. ನೋವಲ್ಲಿ ನರಳಾಡುತ್ತಿದ್ದ ಆಕೆಯನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಸಾವು-ಬದುಕಿನ ನಡುವೆ ಯುವತಿ ಹೋರಾಡುತ್ತಿದ್ದು, ಚಿಕಿತ್ಸೆ ಮುಂದುವರಿದಿದೆ. ಮಗಳ ದಯನೀಯ ಸ್ಥಿತಿ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅತ್ತ ತಲೆಮರೆಸಿಕೊಂಡಿದ್ದ ನಾಗೇಶ್‌ನ ಪತ್ತೆಗಾಗಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸಿದ್ದರು.
16 ದಿನದ ಬಳಿಕ ತಿರುವಣ್ಣಾಮಲೈನ ಆಶ್ರಮವೊಂದರಲ್ಲಿ ಸ್ವಾಮೀಜಿ ವೇಷದಲ್ಲಿ ಇರುವುದು ಖಚಿತಪಡಿಸಿಕೊಂಡ ಪೊಲೀಸರು ಭಕ್ತರ ಸೋಗಲ್ಲಿ ಆಶ್ರಮಕ್ಕೆ ತೆರಳಿದ್ದರು. ಕೊನೆಗೂ ಆರೋಪಿ ನಾಗೇಶ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.