ಉಡುಪಿ: ಮಲಗಿದ್ದಲ್ಲೇ ತಾಯಿ ಮಗುವನ್ನು ಕೊಂದ ಆರೋಪಿಯ ಬಂಧನ!! ಜೋಡಿ ಕೊಲೆಯ ಹಿಂದಿತ್ತು ಹಲವು ಅನುಮಾನ

Share the Article

ಉಡುಪಿ: ಜಿಲ್ಲೆಯ ಹೆಬ್ರಿ ತಾಲೂಕಿನ ಅತ್ರಾಡಿ ಸಮೀಪದ ಮದಗ ಅಂಗನವಾಡಿ ಕೇಂದ್ರದ ಬಳಿಯ ಮನೆಯೊಂದರಲ್ಲಿ ವಾಸವಿದ್ದ ತಾಯಿ ಮಗುವಿನ ಕೊಲೆ ಪ್ರಕರಣವನ್ನು ಹಿರಿಯಡ್ಕ ಪೊಲೀಸರು ಘಟನೆ ನಡೆದ 48 ಗಂಟೆಗಳಲ್ಲಿ ಬೇಧಿಸಿದ್ದು, ಬಂಧಿತ ಆರೋಪಿಯನ್ನು ಮೃತ ಮಹಿಳೆಯ ದೂರದ ಸಂಬಂಧಿ ಹರೀಶ್ ಯಾನೇ ಗಣೇಶ್ ಎಂದು ಗುರುತಿಸಲಾಗಿದೆ.

ಆರೋಪಿ ಗಣೇಶನಿಗೆ ಮದುವೆಯಾಗಿದ್ದು, ಆದರೂ ಮೃತ ಮಹಿಳೆ ಚೆಲುವಿಯೊಂದಿಗೆ ಸಂಬಂಧ ಇರಿಸಿಕೊಂಡು ಆಗಾಗ ಮನೆಗೆ ಬರುತ್ತಿದ್ದ. ಇತ್ತ ಚೆಲುವಿಯೂ ಗಂಡನನ್ನು ಬಿಟ್ಟು ಕೆಲ ಸಮಯ ಅನ್ಯಮತೀಯ ವ್ಯಕ್ತಿಯೊಂದಿಗೆ ಮುಂಬೈಗೆ ತೆರಳಿ ವಾಪಸ್ಸು ಬಂದ ಬಳಿಕ ಗಂಡನನ್ನು ಸೇರಿದ್ದಳು. ಆದರೆ ಅವರಿಬ್ಬರಿಗೆ ಸರಿ ಹೋಗದೇ ಇದ್ದುದರಿಂದ ತಾಯಿ ಮನೆ ಸೇರಿದ್ದಳು.

ಘಟನೆ ನಡೆದ ದಿನ ಆರೋಪಿ ಚೆಲುವಿಯ ಮನೆಗೆ ಬಂದಿದ್ದು, ಚೆಲುವಿಯ ತಾಯಿ ಹಾಗೂ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದ ಹಿನ್ನೆಲೆಯಲ್ಲಿ ಚೆಲುವಿ ತನ್ನ ಮಗಳೊಂದಿಗೆ ಮನೆಯಲ್ಲಿದ್ದಳು. ಅಂದು ರಾತ್ರಿ ಆರೋಪಿ ಹಾಗೂ ಚೆಲುವಿಯ ನಡುವೆ ಫೋನ್ ಸಂಭಾಷಣೆಯೊಂದರ ವಿಚಾರವಾಗಿ ಜಗಳವಾಗಿದ್ದು ಇದರಿಂದ ಕುಪಿತಗೊಂಡ ಆರೋಪಿ ಆಕೆಯನ್ನು ಮಲಗಿದಲ್ಲೇ ಕತ್ತು ಹಿಸುಕಿ ಕೊಲೆ ನಡೆಸಿದ್ದ.

ಬಳಿಕ ಚೆಲುವಿಯ ಮಗಳನ್ನೂ ಕೊಂದು ಒಡವೆ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳೊಂದಿಗೆ ಜಾಗ ಖಾಲಿ ಮಾಡಿದ್ದ. ಮಾರನೇ ದಿನ ಘಟನೆ ಬೆಳಕಿಗೆ ಬಂದಿದ್ದು, ಚೆಲುವಿಯ ಮೊದಲ ಗಂಡ ಅಥವಾ ಆಕೆಯ ಇನ್ನೊಬ್ಬ ಪ್ರಿಯಕರನೇ ಕೊಲೆ ನಡೆಸಿರಬಹುದು ಎನ್ನುವ ಸಂಶಯ ವ್ಯಕ್ತವಾಗಿತ್ತು. ಸದ್ಯ ಕೃತ್ಯ ಎಸಗಿ ಕೈತೊಳೆದುಕೊಂಡಿದ್ದ ಗಣೇಶನನ್ನು ಪೊಲೀಸರು ಬಂಧಿಸಿದ್ದು, ಘಟನೆ ನಡೆದ ಎರಡೇ ದಿನದಲ್ಲಿ ಎಲ್ಲರ ಅನುಮಾನಕ್ಕೂ ತೆರೆ ಬಿದ್ದಿದೆ.

Leave A Reply