ಮಲ್ಪೆ : ನೀರಿಗಿಳಿಯದಂತೆ ಎಚ್ಚರಿಕೆ ನೀಡಿದ ಸ್ಥಳೀಯ ಲೈಫ್ ಗಾರ್ಡ್ ಗಳಿಗೆ ಮನಸೋ ಇಚ್ಛೆ ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರವಾಸಿಗರು!

ಮಲ್ಪೆ ಬೀಚ್ ಅಂದರೆ ಪ್ರವಾಸಿಗರ ತಾಣ ಅಂತಾನೇ ಹೇಳಬಹುದು. ಕಡಲತಡಿಗಳಲ್ಲಿ ಆಟವಾಡುತ್ತಾ ಕುಣಿಯುತ್ತಾ ಕೇಕೇ ಹಾಕುತ್ತಾ ನಲಿಯುವುದೇ ಒಂದು ಮಜಾ. ಈ ಕಡಲು ನೋಡೋಕೆ ಎಷ್ಟು ಮನಮೋಹಕವಾಗಿ ಕಾಣುತ್ತದೆಯೋ ಅಷ್ಟೇ ಭಯಂಕರವಾಗಿರುತ್ತದೆ. ಹಾಗಾಗಿ ಇಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

 

ಪ್ರವಾಸಿಗರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮೋಜಿನಾಟಕ್ಕೆಂದು ನೀರಿಗೆ ಇಳಿದು, ನೀರಿನ ರಭಸಕ್ಕೆ ಸೆಳೆದುಕೊಂಡು ಹೋಗುವುದು ಅನಂತರ ಅದರಿಂದ ಅವಘಡ ಸಂಭವಿಸುವ ಪ್ರಕರಣಗಳು ಹೆಚ್ಚಾಗಿದೆ. ಎಷ್ಟೇ ಎಚ್ಷರಿಕೆ ಕೊಟ್ಟರೂ ಪ್ರಾಣಕ್ಕೆ ಸಂಚಾಕಾರ ತಂದವರು ಹೆಚ್ಚು.

ಮೇ 9 ರಂದು ಮಲ್ಪೆ ಬೀಚ್‌ನಲ್ಲಿ ಸಮುದ್ರಕ್ಕೆ ಇಳಿಯದಂತೆ ಸೂಚಿಸಿದ ಲೈಫ್‌ಗಾರ್ಡ್‌ಗಳಿಗೆ ಹಲ್ಲೆ ನಡೆಸಿದ ಪ್ರಕರಣವೊಂದು ನಡೆದಿದೆ. ಅಪರಾಹ್ನ ಸುಮಾರು 6 ಜನ ಪ್ರವಾಸಿಗರು ಮಲ್ಪೆ ಬೀಚ್ ಲೈಫ್‌ಗಾರ್ಡ್‌ಗಳ ಮಾತನ್ನು ಲೆಕ್ಕಿಸದೆ ನೀರಿಗೆ ಇಳಿದಿದ್ದರು. ಆದರೆ ಲೈಫ್ ಗಾರ್ಡ್ ಗಳು ನೀರಿಗಿಳಿಯದಂತೆ ಎಚ್ಚರಿಕೆ ನೀಡಿದ್ದಕ್ಕೆ ಈ ಪ್ರವಾಸಿಗರು ಸ್ಥಳೀಯ ಲೈಫ್ ಗಾರ್ಡ್ ಗಳಿಗೆ ಮನಸೋ ಇಚ್ಛೆ ಥಳಿಸಿದ್ದಾರೆ.

ಅಲ್ಲದೆ ಇವರು ಲೈಫ್‌ಗಾರ್ಡ್‌ಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಲೈಫ್‌ಗಾರ್ಡ್ ಗಳಾದ ನಾಗರಾಜ, ಅಭಯ್, ರಾಜೇಶ್ ಎಂಬವರಿಗೆ ಹಲ್ಲೆ ನಡೆಸಿದ್ದಾರೆಂದು ದೂರಲಾಗಿದೆ. ಇದರಿಂದ ಗಾಯಗೊಂಡ ಲೈಫ್‌ಗಾರ್ಡ್‌ಗಳನ್ನು ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ನೀಡಲಾಗಿದೆ.

ಪ್ರವಾಸಿಗರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.