ಅನ್ಯಕೋಮಿನ ಯುವಕರಿಂದ ಹಿಂದೂ ಯುವಕನ ಹತ್ಯೆ : ಬಂದ್‌ಗೆ ಕರೆ ನೀಡಿದ ಬಿಜೆಪಿ : 24 ಗಂಟೆಗಳ ಕಾಲ ಇಂಟರ್ನೆಟ್ ಸ್ಥಗಿತ
ಮಂಗಳವಾರ 22 ವರ್ಷದ ಹಿಂದೂ ಯುವಕನನನ್ನು ರಾಜಸ್ಥಾನದ ಭಿಲ್ವಾರದಲ್ಲಿ ಅನ್ಯ ಕೋಮಿನ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಹಾಗಾಗಿ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ದಾಳಿಯ ನಂತರ ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ), ಬಿಜೆಪಿ ಮತ್ತು ಹಿಂದೂ ಜಾಗರಣ್ ಮಂಚ್ ಭಿಲ್ವಾರ ಬಂದ್ ಗೆ ಕರೆ ನೀಡಿವೆ.
ಮೂಲಗಳ ಪ್ರಕಾರ, ಮಂಗಳವಾರ ರಾತ್ರಿ ಹಣದ ವಿಚಾರವಾಗಿ ಈ ಗಲಾಟೆ ನಡೆದಿದ್ದು, ಕೆಲವು ಹುಡುಗರು 22 ವರ್ಷದ ಆದರ್ಶ್ ತಪಾಡಿಯಾ ಎಂಬ ಯುವಕನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಯುವಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಲ್ಲಿ ವೈದ್ಯರು ಯುವಕ ಮೃತ ಪಟ್ಟಿದ್ದಾನೆ ಎಂದು ಹೇಳಿದ್ದಾರೆ.
ಹಾಗಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜೊತೆಗೆ ಆ ಸುತ್ತಮುತ್ತಲಿನ ಪ್ರದೇಶದಲ್ಲಿ ಮೇ 11 ರಂದು ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.
ಭಿಲ್ವಾರಾ ಪ್ರದೇಶ ಕೋಮುವಾದಿ ಸ್ಥಳವಾಗಿದ್ದು, ಇಂತಹ ಪರಿಸ್ಥಿಯನ್ನು ಯಾವಾಗಲೂ ಎದುರಿಸುತ್ತಿದೆ ಎಂದು ವಿಎಚ್ಪಿಯ ಗಣೇಶ್ ಪ್ರಜಾಪತ್ ಹೇಳಿದ್ದಾರೆ. ಮೃತ ಯುವಕನ ಕುಟುಂಬಕ್ಕೆ 50 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಬಲಪಂಥೀಯ ಸಂಘಟನೆ ಆಗ್ರಹಿಸಿದ್ದು, ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದೆ. ಎಲ್ಲಾ ಆರೋಪಿಗಳನ್ನು ಹಿಡಿಯುವವರೆಗೆ, ಮೃತ ಬಾಲಕನ ದೇಹವನ್ನು ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಸಂಘಟನೆ ಆಗ್ರಹಿಸಿದೆ.