ದೇವರಿಂದ ತಪ್ಪಿಸಿಕೊಳ್ಳಲು ಮರ ಏರಿ ಕುಳಿತ ಬಲಿ ಕೊಡಲು ತಂದ ಕೋಳಿ | ಹುಂಜ ಇಳಿಸಲು ಭಕ್ತರ ಹರಸಾಹಸ, ಹೈಡ್ರಾಮಾ ಸೃಷ್ಟಿ
ಹಿಂದಿನ ಕಾಲದ ಅನೇಕ ಪದ್ಧತಿಗಳು ಇಂದಿಗೂ ಚಾಲ್ತಿಯಲ್ಲಿದ್ದು, ಅದರಲ್ಲಿ ದೇವರಿಗೆ ಕೋಳಿ, ಕುರಿಯನ್ನು ಬಲಿಕೊಟ್ಟು ಹರಕೆ ತೀರಿಸುವ ಪದ್ಧತಿಯೂ ಒಂದು. ಆದರೆ ಇಲ್ಲೊಂದು ಕಡೆ ಹರಕೆ ತೀರಿಸಲು ತಂದಿದ್ದ ಕೋಳಿ ದೇವರಿಗೆ ಚಾಲೆಂಜ್ ಹಾಕಿದ್ದು ವಿಶೇಷವೇ. ದೇವಿ ಬಲಿಗಾಗಿ ತಂದಿದ್ದ ಕೋಳಿ ತಪ್ಪಿಸಿಕೊಂಡು ಸಮೀಪದ ಮರ ಏರಿ ದೇವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಕೋಳಿ ಹಿಡಿಯುವ ಪ್ರಯತ್ನದಲ್ಲಿ ಹೈ ಡ್ರಾಮಾ ನೇ ನಡೆದು ಹೋಗಿದೆ.
ಗಾಂಧಿನಗರ ಬಡಾವಣೆಯಲ್ಲಿ ಶ್ರೀಕಾಳಮ್ಮ ದೇವರ ಹಬ್ಬ ಆಚರಿಸಲಾಗುತ್ತಿತ್ತು. ಮಹಿಳೆಯರೆಲ್ಲರೂ ಆರತಿಯೊಂದಗೆ ನೂರಡಿ ರಸ್ತೆಯಲ್ಲಿರುವ ಬಿಸಿಲು ಮಾರಮ್ಮನ ದೇವಾಲಯಕ್ಕೆ ಬಂದಿದ್ದು,ಕೆಲವರು ಕೋಳಿಗಳನ್ನು ಬಲಿ ನೀಡಲು ತಂದಿದ್ದರು. ಭಕ್ತರೊಬ್ಬರು ಎರಡು ನಾಟಿ ಹುಂಜಗಳನ್ನು ಸಹ ತಂದಿದ್ದು, ಇದರಲ್ಲಿ ಒಂದು ಕೋಳಿಯನ್ನು ಬಿಸಿಲು ಮಾರಮ್ಮನಿಗೆ ಬಲಿ ನೀಡಿದರು. ಮತ್ತೊಂದು ಕೋಳಿಯನ್ನು ಬಲಿ ನೀಡಲು ಮುಂದಾಗುತ್ತಿದ್ದಂತೆ ಅದು ತಪ್ಪಿಸಿಕೊಂಡಿತು. ದೇವಾಲಯದ ಎದುರಿಗೆ ಇರುವ ಮರವೇರಿದೆ.
ಇಲ್ಲೇ ನೋಡಿ ಇರೋದು ಕೋಳಿ ನೀಡಿದ ಚಾಲೆಂಜ್. ತಪ್ಪಿಸಿಕೊಂಡು ಮರ ಏರಿದ ಕೋಳಿ, ಏನೇ ಪ್ರಯತ್ನ ಪಟ್ಟರು ಅದು ಮಾತ್ರ ತನ್ನ ಛಲವನ್ನು ಬಿಡಲಿಲ್ಲ.ಮರದ ಮೇಲೆ ಏರಿ ಕೋಳಿ ಹಿಡಿಯಲು ಯತ್ನಿಸಿದಸಿದಾಗ, ನಾನೇನು ಕಮ್ಮಿ ಎಂಬಂತೆ ಒಂದು ರೆಂಬೆಯಿಂದ ಮತ್ತೊಂದು ರೆಂಬೆಗೆ ಹಾರುತ್ತಾ ಮರದ ಮೇಲಕ್ಕೆ ಹೋಗುತ್ತಿತ್ತು. ಅದಕ್ಕೆ ಸರಿಯಾಗಿ ಮಳೆ ಬೇರೆ ಕೋಳಿ ಪರ ವಹಿಸಿತು.ಈ ಮಳೆ ಬಂದ ಕಾರಣ ಮರ ಏರಿದವರೆಲ್ಲರೂ ಕೆಳಗಿಳಿದು ಮಳೆಯಿಂದ ತಪ್ಪಿಸಿಕೊಂಡರು.
ಮಳೆ ಸುರಿದರೂ ಕೋಳಿ ಮಾತ್ರ ಮರದ ಮೇಲಿನಿಂದ ಎಲ್ಲವನ್ನು ನೋಡುತ್ತಾ ಅಲ್ಲೇ ಉಳಿಯಿತು. ಬಹುಶಃ ಅದಕ್ಕೆ ಅಲ್ಲಿ ಆಗುತ್ತಿದ್ದ ಆಗುಹೋಗುಗಳು ಗಮನಕ್ಕೆ ಬಂದಿರಬೇಕು. ಕೊನೆಗೆ ಹಳ್ಳಿಯಲ್ಲಿ ಕೋಳಿ ಸಾಕಿದ್ದವರನ್ನು ಸ್ಥಳಕ್ಕೆ ಕರೆಯಿಸಿ ಕೆಳಗಿಳಿಸಲು ಯತ್ನಿಸಲಾಯಿತು. ಜಪ್ಪಯ್ಯ ಅಂದರೂ ಕೋಳಿ ಕೆಳಕ್ಕೆ ಇಳಿಯಲಿಲ್ಲ.
ಆದ್ರೆ ಕೋಳಿಯ ಆಯುಷ್ಯ ಗಟ್ಟಿ ಇರ್ಲಿಲ್ಲ. ಅಂತಿಮವಾಗಿ ಅಲ್ಲಿದ್ದ ಒಬ್ಬರು ಕೋಳಿ ಹಿಡಿಯುವಲ್ಲಿ ಯಶಸ್ವಿಯಾಗಿ ಕೋಳಿ ವಿರುದ್ಧದ ಚಾಲೆಂಜ್ ನಲ್ಲಿ ಗೆದ್ದು ಬೀಗಿದರು.