ತಾಜ್ ಮಹಲ್ ನ 20 ಕೊಠಡಿಗಳಲ್ಲಿ ಹಿಂದೂ ದೇವರ ವಿಗ್ರಹ : ಮುಚ್ಚಿದ ಬಾಗಿಲು ತೆರೆಯುವಂತೆ ಕೋರಿ ಅರ್ಜಿ ಸಲ್ಲಿಕೆ !
ಯಮುನಾ ನದಿಯ ದಂಡೆಯಲ್ಲಿ ರುವ ತಾಜ್ ಮಹಲ್, 17 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾದ ಅದ್ಭುತವಾಗಿದೆ. ಬಿಳಿ ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟ ತಾಜ್ ಮಹಲ್, ಪ್ರಪಂಚದ 7 ಅದ್ಭುತಗಳಲ್ಲಿ ಒಂದು. ಪ್ರೇಮಸೌಧ ಎಂದೇ ಹೆಸರುವಾಸಿಯಾಗಿರುವ ತಾಜ್ ಮಹಲ್ ಎಷ್ಟು ಬಾರಿ ನೋಡಿದರೂ ಖುಷಿ ಕೊಡುತ್ತದೆ. ಏನೋ ಒಂದು ಅನುಭೂತಿ ನೀಡುತ್ತದೆ. ಅಂತಹ ತಾಜ್ ಮಹಲ್ ಗೆ ಈಗ ಹೊಸ ವಿವಾದವೊಂದು ಆವರಿಸಿದೆ.
ತಾಜ್‌ಮಹಲ್‌ನ ಒಂದು ಭಾಗದಲ್ಲಿ ಹಿಂದಿನಿಂದಲೂ ಮುಚ್ಚಲಾಗಿರುವ 20 ಕೊಠಡಿಗಳ ಬಾಗಿಲು ತೆಗೆಸಬೇಕು ಎಂದು ಕೋರಿ ಅಯೋಧ್ಯೆಯ ಬಿಜೆಪಿ ನಾಯಕ ಡಾ.ರಜನೀಶ್ ಸಿಂಗ್ ಅಲಹಾಬಾದ್ ಹೈಕೋರ್ಟ್‌ನ ಲಕ್ಷ್ಮೀ ಪೀಠಕ್ಕೆ ಅರ್ಜಿವೊಂದನ್ನು ಸಲ್ಲಿಸಿದ್ದಾರೆ.
ಈ ಕೊಠಡಿಗಳಿಗೆ ಯಾರಿಗೂ ಪ್ರವೇಶವಿಲ್ಲ. ಅಲ್ಲಿ ಹಿಂದೂ ದೇವರ ವಿಗ್ರಹಗಳಿವೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಅವುಗಳ ಬಾಗಿಲು ತೆರೆಯುವಂತೆ ಭಾರತೀಯ ಪ್ರಾಚ್ಯ ವಸ್ತು ಸಂಶೋಧನಾ ಸಂಸ್ಥೆಗೆ ನಿರ್ದೇಶನ ನೀಡಬೇಕು. ಕೊಠಡಿಗಳ ಒಳಗೆ ಹಿಂದೂ ದೇವ-ದೇವತೆಯರ ಮೂರ್ತಿಗಳನ್ನು ಮುಚ್ಚಿಡಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ. ಅವುಗಳನ್ನು ತೆರೆಯುವುದರಿಂದ ಯಾವ ವಿವಾದವೂ ಉಂಟಾಗುವುದಿಲ್ಲ. ಸದ್ಯ ಎದ್ದಿರುವ ಸಂಶಯಗಳಿಗೆ ತೆರೆ ಬೀಳಲಿದೆ ಎಂದೂ ಹೇಳಿದ್ದಾರೆ.
2020ರಲ್ಲಿ ಕೂಡ ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ಕೊಠಡಿಗಳ ಬಗ್ಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರೂ ಯಾವ ಪ್ರಯೋಜನವೂ ಆಗಿರಲಿಲ್ಲ ಎಂದಿದ್ದಾರೆ.