ಭಗ್ನ ಪ್ರೇಮಿಯ ಚೆಲ್ಲಾಟ-ಯುವತಿಗೆ ಪ್ರಾಣ ಸಂಕಟ!! ಪ್ರೀತಿಸುವಂತೆ ನೆರೆಮನೆಯಾತನ ಕಿರುಕುಳಕ್ಕೆ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಆತ್ಮಹತ್ಯೆ!!

ನೆರೆಮನೆಯ ಯುವಕನೊಬ್ಬ ಪ್ರೀತಿಸುವಂತೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಅಂತಿಮ ಬಿ.ಕಾಂ ವಿದ್ಯಾರ್ಥಿನಿಯೋರ್ವಳು ಮನನೊಂದು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿ ನಡೆದಿದೆ.

ಮೃತ ಯುವತಿಯನ್ನು ಹೊಸನಗರ ತಾಲೂಕಿನ ಈಶ್ವರಪ್ಪ ಗೌಡ ಎಂಬವರ ಪುತ್ರಿ ವಿದ್ಯಾಶ್ರೀ ಎಂದು ಗುರುತಿಸಲಾಗಿದ್ದು, ಈಕೆ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿಯಾಗಿದ್ದಳು.
ಘಟನೆ ವಿವರ: ಮೃತ ಯುವತಿಯ ನೆರೆಮನೆಯ ಯುವಕನಾದ ಪ್ರಶಾಂತ್ ಎಂಬಾತ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದು,ಇದನ್ನು ಆಕೆ ಒಪ್ಪಿಕೊಳ್ಳದಿದ್ದಾಗ, ಪ್ರತೀ ದಿನವೂ ಆಕೆಯ ಹಿಂದೆ ಸುತ್ತಿ ಕಿರುಕುಳ ನೀಡುತ್ತಿದ್ದ.
ಈತನ ಕಿರುಕುಳ ತಾಳಲಾರದೇ ಬೇಸತ್ತ ಯುವತಿಯು ಏಪ್ರಿಲ್ 19ರಂದು ತೋಟಕ್ಕೆ ಸಿಂಪಡಿಸಲು ತಂದಿದ್ದ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಆಕೆಯ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಪ್ರತಿಷ್ಟಿತ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಆದರೆ ಸುಮಾರು 20 ದಿನಗಳ ಜೀವನ್ಮರಣ ಹೋರಾಟದಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದು, ಆಕೆಯ ಸಾವಿಗೆ ಕಾರಣನಾದ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಲಾಗಿದೆ.