ಅಂತರ್ಯುದ್ಧಕ್ಕೆ ಕನಲಿದ ಶ್ರೀಲಂಕಾ | ನಡುರಸ್ತೆಯಲ್ಲೇ ಸಂಸದನನ್ನು ಅಟ್ಟಾಡಿಸಿ ಹೊಡೆದು ಕೊಂದ ಜನ !
ಶ್ರೀಲಂಕಾದಲ್ಲಿ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಇದರಿಂದ ಸಂಸದ ಹಾಗೂ ಮಾಜಿ ಸಚಿವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಜೊತೆಗೆ ಆಡಳಿತ ಪಕ್ಷದ ಸಂಸದನೋರ್ವ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ.
ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಈ ವಿಷಯ ಬೆಳಕಿಗೆ ಬಂದಿದೆ. ಆಡಳಿತ ಪಕ್ಷದ ಓರ್ವ ಸಂಸದ ಮೃತಪಟ್ಟಿದ್ದು, ಈ ಸಂಘರ್ಷದಲ್ಲಿ ಹತ್ತಾರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಡಳಿತ ಪಕ್ಷದ ಸಂಸದ ಅಮರಕೀರ್ತಿ ಅತ್ತುಕೋರಲ ಅವರು ನಿಟ್ಟಂಬುವಲ್ಲಿ ಬರುತ್ತಿದ್ದ ವೇಳೆ, ಅವರ ಕಾರನ್ನು ತಡೆದು ಇಬ್ಬರು ವ್ಯಕ್ತಿಗಳು ಏಕಾಏಕಿ ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರು ಹತ್ತಿರದ ಕಟ್ಟಡದಲ್ಲಿ ಆಶ್ರಯ ಪಡೆಯಲು ಯತ್ನಿಸಿದ್ದಾರೆ. ಇದೇ ವೇಳೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದಲ್ಲದೆ, ಮಾಜಿ ಸಚಿವ ಜಾನ್ಸನ್ ಫರ್ನಾಂಡೋ ಅವರ ಮೌಂಟ್ ಲ್ಯಾವಿನಿಯಾ ನಿವಾಸ ಮತ್ತು ಸಂಸದ ಸನತ್ ನಿಶಾಂತ ಅವರ ಮನೆ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಹಿಂಸಾಚಾರ ಇನ್ನೂ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ.