ವಿಶ್ವದ ಅತೀ ಎತ್ತರದ ನಾಯಿಯಾಗಿ ಹೊರಹೊಮ್ಮಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸೇರ್ಪಡೆಗೊಂಡ ಜೀಯಸ್!
ವಿಶ್ವದಲ್ಲಿ ಅತೀ ಎತ್ತರದ ಮನುಷ್ಯ,ಎತ್ತರದ ಕುಟುಂಬ, ಹಿರಿಯ ವ್ಯಕ್ತಿ ಎಂಬಂತೆ ಪ್ರಾಣಿಗಳೂ ಕೂಡ ಈ ಹೆಗ್ಗಳಿಕೆಗೆ ಪಾತ್ರವಾಗಿವೆ.ಅವು ಸಹ ತಮ್ಮ ಎತ್ತರದಿಂದಲೇ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಬುಕ್ ಸೇರಿವೆ.ಇದೀಗ ಅಮೇರಿಕಾದ ನಾಯಿಯೊಂದು ಅತೀ ಎತ್ತರದ ನಾಯಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬುಧವಾರ ನಡೆದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಎರಡು ವರ್ಷ ವಯಸ್ಸಿನ ಅಮೇರಿಕನ್ ಗ್ರೇಟ್ ಡೇನ್ ತಳಿಯ ಜೀಯಸ್ ಅನ್ನು ವಿಶ್ವದ ಅತಿ ಎತ್ತರದ ನಾಯಿ ಎಂದು ಘೋಷಿಸಿದೆ. 3 ಅಡಿ 5.18 ಇಂಚು (1.046 ಮೀಟರ್) ಎತ್ತರವಿರುವ ಜೀಯಸ್ ಅಸಾಮಾನ್ಯವಾದ ಎತ್ತರದ ನಾಯಿ.ಜೀಯಸ್ ಅಮೆರಿಕದ ಟೆಕ್ಸಾಸ್‌ನಲ್ಲಿರುವ ಬೆಡ್‌ಫೋರ್ಡ್‌ನಲ್ಲಿ ಡೇವಿಸ್ ಕುಟುಂಬದೊಂದಿಗೆ ವಾಸಿಸುತ್ತಿದ್ದು,ಜೀಯಸ್ ಕೇವಲ ಎಂಟು ವಾರಗಳ ಮರಿಯಾಗಿದ್ದಾಗ ಬ್ರಿಟಾನಿ ಡೇವಿಸ್ ಅವರು ಇದನ್ನು ದತ್ತು ಪಡೆದು ಅದರ ಪಾಲನೆ, ಪೋಷಣೆ ಮಾಡುತ್ತಾ ಬಂದಿದ್ದಾರೆ. 2012 ರಲ್ಲಿ ಅತ್ಯಧಿಕ ಎತ್ತರ ನಾಯಿ ಎಂದು ಗ್ರೇಟ್ ಡೇನ್ ಜಾರ್ಜ್ ಹೆಸರು ಮಾಡಿತ್ತು.
ತನ್ನ ನಾಯಿಮರಿ ಬಗ್ಗೆ ಮಾತಾಡುತ್ತಾ ಡೇವಿಸ್, ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೇರಿರುವುದು ಖುಷಿಯಾಗಿದೆ, “ನಾವು ಅವನನ್ನು ದತ್ತು ಪಡೆದಾಗ ಕೇವಲ 8 ವಾರಗಳ ಮರಿಯಾಗಿದ್ದನು, ಈಗ ಜೀಯಸ್ ಬೆಳೆದಿದ್ದಾನೆ ಮತ್ತು ದೊಡ್ಡವನಾಗಿದ್ದಾನೆ. ಜೊತೆಗೆ ಅವನ ಪುಟ್ಟ ಪಾದಗಳು ಸಹ ದೊಡ್ಡ ಪಂಜಗಳಾಗಿವೆ” ಎಂದು ಹೇಳಿದರು.ಜನರು ಜೀಯಸ್ ಅನ್ನು ನೋಡಿದಾಗಲೆಲ್ಲಾ, “ವಾಹ್, ಇದು ನಾನು ನೋಡಿದ ಅತ್ಯಂತ ಎತ್ತರದ ನಾಯಿ ಎಂದು ಹಲವಾರು ಜನ ಸಾಕಷ್ಟು ಕಾಮೆಂಟ್‌ಗಳನ್ನು ಮಾಡುತ್ತಿದ್ದರು. ಆದರೆ ಅದು ಈಗ ಅಕ್ಷರಶಃ ನಿಜವಾಗಿದೆ. ಜೀಯಸ್ ವಿಶ್ವದ ಅತಿ ಎತ್ತರದ ನಾಯಿ ಎಂಬ ಖ್ಯಾತಿ ಪಡೆದುಕೊಂಡಿದ್ದಾನೆ ಎಂದು ಜೀಯಸ್ ಮಾಲೀಕ ಡೇವಿಸ್ ತಿಳಿಸಿದರು.
ಅಲ್ಲದೆ,ಡೇವಿಸ್ ಜೀಯಸ್ ಎತ್ತರದ ಬಗ್ಗೆಗಿನ ಜನರ ಪ್ರತಿಕ್ರಿಯೆಗಳ ಬಗ್ಗೆ ವಿವರಿಸುತ್ತಾ,ನಾವು ಜೀಯಸ್ನನ್ನು ಹೊರಗಡೆ ಕರೆದುಕೊಂಡು ಹೋದಾಗ ವಾಹ್ ಇದು ಕುದುರೆ, ನಾನು ಇದರ ಮೇಲೆ ಸವಾರಿ ಮಾಡಬಹುದೇ ಎಂದು ಸಹ ಹಲವರು ಹೇಳಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.