ಕುಡಿದರೂ ಕಿಕ್ ಏರ್ತಾ ಇಲ್ಲ: ಗೃಹ ಸಚಿವರಿಗೆ ಪತ್ರದ ಮೂಲಕ ದೂರು ನೀಡಿದ ಕುಡುಕ!
ಲೋಕದ ಚಿಂತೆ ಒಂದಾದರೆ, ಕುಡುಕರಿಗೆ ಅವರದೇ ಆದ ಚಿಂತೆ. ಇದ್ಯಾಕೆ ಹೇಳ್ತಿದ್ದೇವೆ ಅಂದರೆ, ಇಲ್ಲೊಬ್ಬ ಕುಡುಕ, ಕುಡಿದರೂ ನಶೆ ಏರ್ತಾ ಇಲ್ಲ ಅಂತ, ರಾಜ್ಯದ ಗೃಹಸಚಿವರಿಗೆ ದೂರು ನೀಡಿದ್ದಾನೆ.
ಈ ಘಟನೆ ನಡೆದಿರುವುದು ಮಧ್ಯಪ್ರದೇಶದಲ್ಲಿ. ಉಜ್ಜಯಿನಿಯ ಬಹದ್ದೂರ್ ಗಂಜ್ ಆರ್ಯ ಸಮಾಜ ಮಾರ್ಗದಲ್ಲಿ ನೆಲೆಸಿರುವ ಲೋಕೇಂದ್ರ ಕುಡಿತದ ಚಟ ಹೊಂದಿದ್ದು, ಕಳೆದ 20 ವರ್ಷಗಳಿಂದ ಮದ್ಯಪಾನದ ಚಟ ಬೆಳೆಸಿಕೊಂಡಿದ್ದಾನೆ. ಏಪ್ರಿಲ್ 12 ರಂದು ಕ್ಷೀರಸಾಗರ ಪ್ರದೇಶದಲ್ಲಿ ಇರುವ ಮದ್ಯದಂಗಡಿಯಿಂದ ನಾಲ್ಕು ಕ್ವಾರ್ಟರ್ ದೇಶೀಯ ಮದ್ಯವನ್ನು ಖರೀದಿಸಿದ್ದ ಎನ್ನಲಾಗಿದ್ದು, ಆ ವೇಳೆಯಲ್ಲಿ ಎರಡು ಕ್ವಾರ್ಟರ್ ಕುಡಿದು ನೋಡಿದಾಗ ಆತನಿಗೆ ನಶೆ ಏರಲಿಲ್ಲವಂತೆ. ನಂತರ ಬಾಟಲಿ ಪೂರ್ತಿ ಕುಡಿದರೂ ಮದ್ಯದ ನಶೆ ಏರದಿದ್ದಾಗ ಅದರಲ್ಲಿ ಕಲಬೆರಕೆ ಇರುವ ಶಂಕೆ ವ್ಯಕ್ತವಾಗಿದೆ ಎಂದು ಲೋಕೇಂದ್ರ ಹೇಳಿದ್ದಾನೆ. ಇದೇ ವೇಳೆ, ಆತ ಅಂಗಡಿಯವರಿಗೆ ದೂರು ನೀಡಿದಾಗ, ಅವರು ‘ನಿನಗೆ ಏನು ಬೇಕಾದರೂ ಮಾಡುತ್ತೇನೆ ‘ ಎಂದು ಬೆದರಿಕೆ ಹಾಕಿದ್ದಾರಂತೆ. ಈ ಕುಡುಕ ಎಲ್ಲರಂತೆ ಸುಮ್ಮನೆ ಅವರಿವರ ಕೈಲಿ ಬೈಸಿಕೊಂಡು ಸುಮ್ಮನೆ ಕೂತಿಲ್ಲ. ಸೀದಾ ಎದ್ದು ಹೋಗಿ ಗೃಹಸಚಿವ ಮತ್ತು ಇತ್ರಾ ಹಿರಿಯ ಹಾಗೂ ಅಧಿಕಾರಿಗಳಿಗೆ ಪತ್ರ ಬರೆದಿದ್ದಾನೆ. ಈ ಪತ್ರದಲ್ಲಿ ತನ್ನ ಸಂಕಟ ಹೇಳಿಕೊಂಡಿದ್ದಾನೆ.
ಫುಲ್ ಬಾಟಲ್ ಪೂರ್ತಿ ಎತ್ತಿದರೂ ನಶೆಯೇರಲಿಲ್ಲ ಅಂಥ ಈತ ಹೇಳಿದ್ದು, ಗುತ್ತಿಗೆದಾರರು ಮದ್ಯಕ್ಕೆ ನೀರು ಬೆರೆಸುವುದರಿಂದ, ಇದರಿಂದ ಕುಡಿತದ ಅಮಲು ಏರುತ್ತಿಲ್ಲ ಎಂದು ಪತ್ರದಲ್ಲಿ ತನ್ನ ಗೋಳು ತೋಡಿಕೊಂಡಿದ್ದಾನೆ.
ತಮ್ಮ ಬೇಡಿಕೆಗೆ ಕಿವಿಗೊಡದಿದ್ದರೆ ಗ್ರಾಹಕರ ವೇದಿಕೆಯಲ್ಲಿ ದೂರು ನೀಡುವುದಾಗಿ ಲೋಕೇಂದ್ರ ಹೇಳಿದ್ದು ನನಗೆ ಆದದ್ದು ಬೇರೆಯವರಿಗೆ ಆಗಬಾರದು ಅಂತ ಆತ ತನ್ನ ಮನವಿಯಲ್ಲಿ ಹೇಳಿದ್ದಾನೆ. ಇದೇ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳು ಲೋಕೇಂದ್ರ ಅವರಿಗೆ ಉತ್ತರ ಬರೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.