ಸೆಲ್ಫೀ ಹುಚ್ಚು – ಕಾಲು ಜಾರಿ ನದಿಗೆ ಬಿದ್ದು ಗೃಹಿಣಿ ಸಾವು

ಸೆಲ್ಫೀ ಸೆಲ್ಫೀ…ಈ ಗೀಳು ಇತ್ತೀಚೆಗೆ ಎಲ್ಲಾ ಕಡೆ ಹಬ್ಬಿಬಿಟ್ಟಿದೆ. ಎಷ್ಟೇ ಎಚ್ಚರಿಕೆ ನೀಡಿದರೂ ಎಲ್ಲೆಲ್ಲೋ ಹೋಗಿ ಸೆಲ್ಫಿ ತೆಗೆಯುವುದು ನಂತರ ಅಕಸ್ಮಾತ್ ಸಾವಿಗೆ ಶರಣಾಗುವುದು. ಇಂಥದ್ದೇ ಒಂದು ಸೆಲ್ಫೀ ಗೀಳಿನಿಂದಾಗಿ ಗೃಹಣಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

 

ಚಾಮರಾಜನಗರ ಜಿಲ್ಲೆಯ ನಂಜದೇವನಪುರ ಗ್ರಾಮದ ಮಹಿಳೆ ಕವಿತಾ ನದಿ ಪಾಲಾದವರು.

ಶ್ರೀಕ್ಷೇತ್ರ ಸಂಗಮದ ಮುಂಭಾಗದಲ್ಲಿರುವ ಕಪಿಲಾ ನದಿ ದಡದಲ್ಲಿ ಈ ಘಟನೆ ನಡೆದಿದೆ. ತನ್ನ ಪತಿ ಗಿರೀಶ್ ಹಾಗೂ ಪುತ್ರಿ ಜೊತೆ ಕವಿತಾ ಅವರು ಸಂಗಮಕ್ಕೆ ಬಂದಿದ್ದರು. ಶ್ರೀಕ್ಷೇತ್ರ ಸಂಗಮದ ಮುಂಭಾಗದಲ್ಲಿರುವ ಕಪಿಲಾ ನದಿ ದಡದಲ್ಲಿ ಕಾಲು ತೊಳೆಯಲು ಹೋಗಿದ್ದು, ಈ ವೇಳೆ ತಮ್ಮ ಮೊಬೈಲ್ ಫೋನ್ ಮೂಲಕ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಕವಿತಾ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸುವ ಪ್ರಯತ್ನ ಕೂಡಲೇ ಮಾಡಿತಾದರೂ, ಅಷ್ಟೊತ್ತಿಗೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಹೆಂಡತಿಯನ್ನು ಕಳೆದುಕೊಂಡ ಪತಿ ಗಿರೀಶ್ ಮತ್ತು ಅವರ ಪುತ್ರಿಯ ಆಕ್ರಂದನ ಮುಗಿಲುಮುಟ್ಟಿದೆ. ಮೃತ ದೇಹವನ್ನು ನದಿಯಿಂದ ಹೊರತೆಗೆದು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave A Reply

Your email address will not be published.